ತುಮಕೂರು, ಮೇ 19: ತುಮಕೂರು ಜಿಲ್ಲೆ ಒಂದರಲ್ಲೇ 600 ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಒಂದೇ ದಿನ ನೇಮಕಾತಿ ಪತ್ರವನ್ನು ಕೊಡಲಾಗಿದ್ದು, ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಟ್ಟಿಗೆ ದಾಖಲೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದ್ದಾರೆ. ತುಮಕೂರಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ 3ನೇ ವರ್ಷದ ಸಾಧನಾ ಸಮಾವೇಶ ಮತ್ತು 1.52 ಲಕ್ಷ ಮಂದಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದಲ್ಲದೆ, ಇದೇ ವೇದಿಕೆಯ ಮೂಲಕ 106 ವಿವಿಧ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುತ್ತಿದ್ದೇವೆ ಎಂದು ಹೇಳಿದ ಸಚಿವರು, ಇವತ್ತು ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಇವೆಲ್ಲವೂ ಮಹಿಳೆಯರನ್ನು ಕೇಂದ್ರವಾಗಿಟ್ಟು ಮಾಡಿರುವಂಥ ಯೋಜನೆಗಳು. ಇವೆಲ್ಲವೂ ಅತ್ಯಂತ ಯಶಸ್ವೀ ಯೋಜನೆಗಳಾಗಿ ಜನರ ಮನಸ್ಸು ತಟ್ಟಿದೆ. ಆದರೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಯವರು, ಉತ್ತರ ಭಾರತದ ರಾಜ್ಯಗಳಲ್ಲಿ ಇದೇ ಕರ್ನಾಟಕದ ಮಾಡೆಲನ್ನು ಕಾಪಿ ಮಾಡಿಕೊಂಡು ಯೋಜನೆಗಳನ್ನು ರೂಪಿಸಿ ಚುನಾವಣೆ ಗೆಲ್ಲುತ್ತಿದ್ದಾರೆ. ಆದರೆ ಇಲ್ಲಿ ಮಾತ್ರ ತೋರಿಕೆಗಾಗಿ, ವಿರೋಧಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾರೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ 60 ಸಾವಿರ ಕೋಟಿಯಷ್ಟು ಹಣ ಬಳಸುತ್ತಿದ್ದೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ವರ್ಷಕ್ಕೆ 28 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದ್ದೇವೆ. ಇದರಿಂದ ಮಹಿಳೆಯರು ಆರ್ಥಿಕ ಶಕ್ತಿವಂತರಾಗಿದ್ದಾರೆ. ಗೃಹಲಕ್ಷ್ಮಿ ಕಾರಣದಿಂದ ನಮ್ಮ ಜೀವನ ಬದಲಾಗಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮಗೂ ಹೆಮ್ಮೆಯಾಗುತ್ತಿದೆ ಎಂದರು.
ಕೇಂದ್ರ ಸರ್ಕಾರದ ಅಸಹಕಾರದ ಮಧ್ಯೆಯೂ ರಾಜ್ಯ ಸರ್ಕಾರ ಅಪೂರ್ವ ಸಾಧನೆ ಮಾಡುತ್ತಿದೆ. ಚುನಾವಣೆ ಪೂರ್ವ ನೀಡಿದ್ದ ವಚನವನ್ನು ಪಾಲಿಸುತ್ತಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಸಮಾರಂಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಭೂರಹಿತ 1.52 ಲಕ್ಷ ಕುಟುಂಬಗಳಿಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಸಲುವಾಗಿ ಹಕ್ಕುಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ್, ಡಾ.ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಕೃಷ್ಣ ಭೈರೇಗೌಡ, ಎಚ್.ಸಿ ಮಹದೇವಪ್ಪ, ಬೈರತಿ ಸುರೇಶ್, ಎಚ್.ಕೆ. ಪಾಟೀಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.