ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಾಂಧಿ ಕ್ರೀಡಾಂಗಣಕ್ಕೆ ಸಚಿವ ಡಾ.ಪರಮೇಶ್ವರ್ ಹೆಸರು: ನಾಮಫಲಕ ತೆರವಿಗೆ ಬಿಜೆಪಿ ಆಗ್ರಹ

ಮನರೇಗಾ ಹೆಸರು ಬದಲಿಸಿದ್ದಕ್ಕೆ ಕಾಂಗ್ರೆಸ್‌ನವರು ದೇಶಾದ್ಯಂತ ಹೋರಾಟ ಮಾಡುತ್ತಿದ್ದಾರೆ, ಈಗ ಮಹಾತ್ಮ ಗಾಂಧಿ ಹೆಸರು ತೆಗೆದು ತಮ್ಮ ಹೆಸರು ಇಟ್ಟುಕೊಂಡು ಡಾ.ಪರಮೇಶ್ವರ್ ಅವರೇ ವಿವಾದ ಮಾಡಿಕೊಂಡಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಶಾಸಕ ಜ್ಯೋತಿಗಣೇಶ್ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಜ್ಯೋತಿಗಣೇಶ್‌ ಮಾತನಾಡಿದರು.

ತುಮಕೂರು: ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ (Mahatma Gandhi stadium) ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೆಸರಿಟ್ಟಿರುವುದು ಸಾರ್ವಜನಿಕರ ಭಾವನೆಗೆ ವಿರುದ್ಧವಾಗಿದೆ. ಇದು ಡಾ.ಪರಮೇಶ್ವರ್ ಅವರ ವ್ಯಕ್ತಿತ್ವಕ್ಕೂ ಧಕ್ಕೆ ತರಲಿದೆ. ಆ ಕ್ರೀಡಾಂಗಣವು ಮಹಾತ್ಮ ಗಾಂಧಿ ಕ್ರೀಡಾಂಗಣವಾಗೇ ಉಳಿಯಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಸಚಿವ ಡಾ.ಪರಮೇಶ್ವರ್ ಸಾತ್ವಿಕ ವ್ಯಕ್ತಿತ್ವದವರು, ವಿವಾದಗಳನ್ನು ಮಾಡಿಕೊಳ್ಳುವುದಿಲ್ಲ, ಅವರಿಗೆ ಶತ್ರುಗಳೂ ಇಲ್ಲ. ಈಗಿರುವಾಗ ಕ್ರೀಡಾಂಗಣಕ್ಕೆ ತಮ್ಮ ಹೆಸರು ಇಡುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸಚಿವರ ಒಪ್ಪಿಗೆ ಮೇಲೆ ಹೆಸರಿಟ್ಟರೂ ಅಥವಾ ಅವರನ್ನು ಓಲೈಕೆ ಮಾಡಲು ಅಧಿಕಾರಿಗಳು ಈ ಪ್ರಯತ್ನ ಮಾಡಿದರೋ ಗೊತ್ತಿಲ್ಲ, ಅವರ ಹೆಸರನ್ನು ಹಿಂಪಡೆದು ಗಾಂಧಿ ಹೆಸರನ್ನೇ ಉಳಿಸಬೇಕು ಎಂದರು.

ಮನರೇಗಾ ಬಗ್ಗೆ ಕಾಂಗ್ರೆಸ್‌ನವರು ದೇಶಾದ್ಯಂತ ಹೋರಾಟ ಮಾಡುತ್ತಿದ್ದಾರೆ, ಈಗ ಮಹಾತ್ಮ ಗಾಂಧಿ ಹೆಸರು ತೆಗೆದು ತಮ್ಮ ಹೆಸರು ಇಟ್ಟುಕೊಂಡು ಡಾ.ಪರಮೇಶ್ವರ್ ಅವರೇ ವಿವಾದ ಮಾಡಿಕೊಂಡಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಡಾ.ಪರಮೇಶ್ವರ್ ಬಗ್ಗೆ ವೈಯಕ್ತಿಯವಾಗಿ ಯಾವುದೇ ತಕರಾರಿಲ್ಲ, ಈ ವಿವಾದ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ. ಡಾ.ಪರಮೇಶ್ವರ್ ಹೆಸರಿನ ಬೋರ್ಡ್ ತೆಗೆಯಬೇಕು ಎಂದು ಬಿಜೆಪಿ ಒತ್ತಾಯಿಸುತ್ತದೆ ಎಂದು ಜ್ಯೋತಿಗಣೇಶ್ ಹೇಳಿದರು.

ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಸಚಿವ ಡಾ.ಜಿ.ಪರಮೇಶ್ವರ್ ಅವರ ಗಮನಕ್ಕೆ ಬಾರದೆ ಕ್ರೀಡಾಂಗಣದ ಹೆಸರು ಬದಲಾವಣೆ ಮಾಡಿಲ್ಲ, ಎಲ್ಲವೂ ಅವರ ಗಮನಕ್ಕೆ ತಂದೇ ಮಾಡಿರುತ್ತಾರೆ, ಕ್ರೀಡಾಂಗಣಕ್ಕೆ ಡಾ.ಪರಮೇಶ್ವರ್ ಹೆಸರು ಇಡಲು ಅವರ ಒಪ್ಪಿಗೆಯೂ ಇದೆ. ಈ ನಿರ್ಧಾರವನ್ನು ಬಿಜೆಪಿ ಖಂಡಿಸುತ್ತೇನೆ. ವಿರೋಧ ಪಕ್ಷದವರಾಗಿ ಡಾ.ಪರಮಶ್ವರ್ ಅವರ ಎಲ್ಲಾ ನಿರ್ಧಾರಗಳನ್ನು ನಾವು ಒಪ್ಪಿಕೊಳ್ಳಲಾಗುವುದಿಲ್ಲ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮಾತನಾಡಿ, ಮಹಾತ್ಮ ಗಾಂಧಿ ಹೆಸರನ್ನು ಕೈಬಿಡಲಾಗಿದೆ ಎಂದು ನರೇಗಾ ಯೋಜನೆ ನೆಪ ಮಾಡಿಕೊಂಡು ಕಾಂಗ್ರೆಸ್‌ನವರು ವಿವಾದ ಮಾಡಿದ್ದಾರೆ. ಈಗ ಇವರು ಮಾಡಿದ್ದೇನು, ಗಾಂಧಿ ಹೆಸರನ್ನು ತೆಗೆದು ಡಾ.ಪರಮೇಶ್ವರ್ ಹೆಸರು ಇಟ್ಟಿರುವ ಇವರು ಮಾಡಿರುವುದು ಏನು? ಎಂದು ಪ್ರಶ್ನಿಸಿದ ಅವರು, ಕ್ರೀಡಾಂಗಣಕ್ಕೆ ಇಟ್ಟಿರುವ ಡಾ.ಪರಮೇಶ್ವರ್ ಹೆಸರು ತೆಗೆಯದಿದ್ದರೆ ಬಿಜೆಪಿಯಿಂದ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್‌ಗೌಡ, ಉಪಾಧ್ಯಕ್ಷ ಸಾಗರನಹಳ್ಳಿ ವಿಜಯಕುಮಾರ್, ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ, ನಗರ ಅಧ್ಯಕ್ಷ ಧನುಷ್, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಜೆ.ಜಗದೀಶ್ ಮೊದಲಾದವರು ಹಾಜರಿದ್ದರು.