ಮಧುಗಿರಿ: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಿಂದ ನೃಪತುಂಗ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿ-69ರಲ್ಲಿ 390 ಮೀಟರ್ ಉದ್ದದ ಅಪಘಾತ ವಲಯವನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ₹29.94 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ (KN Rajanna) ಹೇಳಿದರು.
ಈ ಪ್ರದೇಶದಲ್ಲಿ ಕಳೆದ 8 ವರ್ಷಗಳಲ್ಲಿ ಒಟ್ಟು 10 ರಸ್ತೆ ಅಪಘಾತಗಳು ಸಂಭವಿಸಿದ್ದು, ದುರದೃಷ್ಟವಶಾತ್ 4 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 8 ಮಂದಿ ಗಾಯಗೊಂಡಿದ್ದಾರೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಅಪಘಾತ ವಲಯವನ್ನು ತೆರವುಗೊಳಿಸಬೇಕೆಂಬುದು ಹಲವು ವರ್ಷಗಳ ಜನರ ಪ್ರಮುಖ ಬೇಡಿಕೆಯಾಗಿತ್ತು.
ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಮಧುಗಿರಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ-69ರ ಅಪಘಾತ ವಲಯವನ್ನು ತೆರವುಗೊಳಿಸಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ₹29.94 ಕೋಟಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮಧುಗಿರಿ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಲಾಯಿತು ಎಂದು ಅವರು ತಿಳಿಸಿದರು.
ಜನರ ಜೀವದ ಸುರಕ್ಷತೆ, ಸುಗಮ ಸಂಚಾರ ಮತ್ತು ಮಧುಗಿರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಆದ್ಯತೆ. ಜನರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿದೆ ಎಂದು ಹೇಳಿದರು.