ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕುಪ್ಪೂರು ಸಹಕಾರ ಸಂಘಕ್ಕೆ ಸುವರ್ಣ ಸಂಭ್ರಮ; ಸೆ.25ರಂದು ವಾರ್ಷಿಕ ಮಹಾಸಭೆ

Chikkanayakanahalli News: 1976ರಲ್ಲಿ ಆರಂಭಗೊಂಡ ಚಿಕ್ಕನಾಯಕನಹಳ್ಳಿಯ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸಂಘದ 50ನೇ ವರ್ಷದ ವಾರ್ಷಿಕ ಮಹಾಸಭೆ ಸೆ.25ರಂದು ನಡೆಯಲಿದೆ. ಈ ಕುರಿತ ವಿವರ ಇಲ್ಲಿದೆ.

ಚಿಕ್ಕನಾಯಕನಹಳ್ಳಿ: ರೈತರ ಆರ್ಥಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ, ಗ್ರಾಮೀಣ ಜನರ ಅಗತ್ಯಗಳಿಗೆ ಸ್ಪಂದಿಸುತ್ತಾ ಐದು ದಶಕಗಳ ಸೇವೆ ಸಲ್ಲಿಸಿರುವ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸಂಘದ 50ನೇ ವರ್ಷದ ವಾರ್ಷಿಕ ಮಹಾಸಭೆ ಸೆ.25ರಂದು ನಡೆಯಲಿದೆ.

1976ರಲ್ಲಿ ಆರಂಭಗೊಂಡ ಸಂಘವು ಕಳೆದ ಐದು ದಶಕಗಳಲ್ಲಿ ಸದಸ್ಯರ ವಿಶ್ವಾಸ ಗಳಿಸಿಕೊಂಡು ಹಂತಹಂತವಾಗಿ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಪ್ರಸ್ತುತ ಸಂಘದಲ್ಲಿ 4,103 ಷೇರುದಾರರಿದ್ದು, ₹1.05 ಕೋಟಿ ಷೇರು ಬಂಡವಾಳ ಹಾಗೂ ₹7.90 ಕೋಟಿ ಠೇವಣಿ ಹೊಂದಿದೆ. ಇದುವರೆಗೆ ₹13 ಕೋಟಿ ಸಾಲ ವಿತರಿಸಲಾಗಿದ್ದು, ಈ ಪೈಕಿ ₹5.66 ಕೋಟಿ ಬೆಳೆ ಸಾಲವನ್ನು ರೈತರಿಗೆ ವಿತರಿಸಲಾಗಿದೆ.

ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಂದರ್ಭದಲ್ಲಿ ರೈತರಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಸಂಘವು ಸ್ಥಳೀಯ ಕೃಷಿ ಆರ್ಥಿಕತೆಗೆ ತನ್ನದೇ ಆದ ಕೊಡುಗೆ ನೀಡಿದೆ. ಸಂಘದ ಕಾರ್ಯನಿರ್ವಹಣೆ ಹಾಗೂ ಸಾಧನೆಯನ್ನು ಗುರುತಿಸಿ ಅಪೆಕ್ಸ್ ಬ್ಯಾಂಕ್‌ನಿಂದ ‘ಉತ್ತಮ ಸಂಘʼ ಪ್ರಶಸ್ತಿಯೂ ಲಭಿಸಿದೆ.

ಸೇವೆಯಲ್ಲಿ ವೈವಿಧ್ಯ

ಸದಸ್ಯರ ಅನುಕೂಲ ಹಾಗೂ ಗ್ರಾಮೀಣ ಭಾಗದ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಂಘವು ಸಾಂಪ್ರದಾಯಿಕ ಸಹಕಾರ ಸೇವೆಗಳ ಜತೆಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಎಟಿಎಂ ಸ್ಥಾಪನೆ, ಹಿಟ್ಟಿನ ಗಿರಣಿ ಹಾಗೂ ಕೊಬ್ಬರಿ ಎಣ್ಣೆ ತಯಾರಿಕಾ ಘಟಕವನ್ನು ಆರಂಭಿಸಿರುವುದು ಸಂಘದ ಪ್ರಮುಖ ಹೆಜ್ಜೆಗಳಾಗಿವೆ.

ಇದೀಗ ಮುಂದಿನ ಹಂತವಾಗಿ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಆರಂಭಿಸುವ ಉದ್ದೇಶವನ್ನು ಸಂಘ ಹೊಂದಿದೆ. ಇದರಿಂದ ಗ್ರಾಮೀಣ ಜನರಿಗೆ ವಿವಿಧ ಸರ್ಕಾರಿ ಹಾಗೂ ಆನ್‌ಲೈನ್ ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗುವ ನಿರೀಕ್ಷೆಯಿದೆ.

ಆಡಳಿತ ಮಂಡಳಿ

ಪ್ರಸ್ತುತ ಬೆನಕನಕಟ್ಟೆ ಯುವರಾಜ ಅವರು ಸಂಘದ ಅಧ್ಯಕ್ಷರಾಗಿದ್ದು, ನವಿಲೆ ಶೈಲಾ ಉಪಾಧ್ಯಕ್ಷರಾಗಿದ್ದಾರೆ. ಎಸ್.ಎಸ್. ಶಂಕರಪ್ಪ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌ ನಿರ್ದೇಶಕರಾಗಿ ಹೆಸರಹಳ್ಳಿ ಶಾಂತಕುಮಾರ್, ಅರಳೀಕೆರೆ ಎ.ಎಂ. ಉಮೇಶ್, ಕುರುಬರಹಳ್ಳಿ ಜಯಣ್ಣ, ಅರಳೀಕೆರೆ ಎಸ್. ಉಮೇಶ್, ಅಣೇಕಟ್ಟೆ ರಾಕೇಶ್, ಅರಳೀಕೆರೆ ಶಶಿಕುಮಾರ್, ಬೇವಿನಹಳ್ಳಿ ಅಂಬಿಕಾ, ಕುಪ್ಪೂರು ಮಹೇಶ್ ಹಾಗೂ ಹೆಸರಹಳ್ಳಿ ನಾಗರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ.

Tiptur News: ಜಿಲ್ಲಾಮಟ್ಟದ ಕ್ರೀಡಾಕೂಟ; ತಿಪಟೂರು ತಾಲೂಕು ವಿದ್ಯಾರ್ಥಿಗಳ ಉತ್ತಮ ಸಾಧನೆ

ಸೆ.25ರಂದು ನಡೆಯಲಿರುವ 50ನೇ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಐದು ದಶಕಗಳ ಸೇವಾ ಪಯಣವನ್ನು ಮೆಲುಕು ಹಾಕುವುದರೊಂದಿಗೆ, ಮುಂದಿನ ದಿನಗಳಲ್ಲಿ ಸದಸ್ಯರು ಹಾಗೂ ರೈತರಿಗೆ ಇನ್ನಷ್ಟು ಪರಿಣಾಮಕಾರಿ ಸೇವೆ ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆಗೆ ವೇದಿಕೆಯಾಗಲಿದೆ.