I ಧನಂಜಯ್, ಚಿಕ್ಕನಾಯಕನಹಳ್ಳಿ
ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಬಿ.ಎಸ್. ಯಡಿಯೂರಪ್ಪ (BS Yediyurappa) ಎಂಬ ಹೆಸರು ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಅದೊಂದು ಅಪ್ರತಿಮ ಹೋರಾಟದ ಶಕ್ತಿ. ಸಾಮಾನ್ಯ ಕಾರ್ಯಕರ್ತನ ಹಂತದಿಂದ ರಾಜ್ಯದ ಅತ್ಯುನ್ನತ ಸ್ಥಾನಕ್ಕೇರಿದ ಬಿಎಸ್‌ವೈ ಅವರ ಸಾರ್ವಜನಿಕ ಜೀವನಕ್ಕೆ ಈಗ ಸಾರ್ಥಕ 50 ವರ್ಷಗಳ ಸಂಭ್ರಮ. ಶಿಕಾರಿಪುರ ಅವರ ರಾಜಕೀಯ ಕರ್ಮಭೂಮಿಯಾದರೂ, ತುಮಕೂರು ಜಿಲ್ಲೆಯ ಕಲ್ಪತರು ನಾಡು ಚಿಕ್ಕನಾಯಕನಹಳ್ಳಿಯ (Chikkanayakanahalli) ಮೇಲೆ ಅವರು ಹೊಂದಿರುವ ಮಮಕಾರ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಅವರು ನೀಡಿದ ವೇಗ ಇತಿಹಾಸದ ಪುಟಗಳಲ್ಲಿ ಮೈಲುಗಲ್ಲಾಗಿ ಉಳಿದಿದೆ.
ನಾಯಕರ ಒಡನಾಟ ಮತ್ತು ಅಭಿವೃದ್ಧಿಯ ಪಥ
ಬಿಎಸ್‌ವೈ ಅವರ ಸುದೀರ್ಘ ರಾಜಕೀಯ ಪಯಣದಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮುಖಂಡರೊಂದಿಗೆ ದಶಕಗಳ ನಿಕಟ ಬಾಂಧವ್ಯವಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಯಡಿಯೂರಪ್ಪನವರು ಅವರು ನೀಡಿದ ಸಹಕಾರ ಮತ್ತು ದಕ್ಷತೆಯನ್ನು ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ ಅವರು ಸದಾ ಸ್ಮರಿಸುತ್ತಾರೆ. ಅದೇ ರೀತಿ ಹಿರಿಯ ನಾಯಕರಾದ ಜೆ.ಸಿ. ಮಾಧುಸ್ವಾಮಿ ಅವರೊಂದಿಗಿನ ಒಡನಾಟವೂ ಕ್ಷೇತ್ರದ ಪ್ರಗತಿಗೆ ಪೂರಕವಾಗಿತ್ತು. ಈ ಎಲ್ಲಾ ನಾಯಕರ ಸಮನ್ವಯದೊಂದಿಗೆ ಕ್ಷೇತ್ರಕ್ಕೆ ಗರಿಷ್ಠ ಸವಲತ್ತುಗಳನ್ನು ತರುವಲ್ಲಿ ಬಿಎಸ್‌ವೈ ಸದಾ ಮುಂಚೂಣಿಯಲ್ಲಿದ್ದರು.
ನೀರಾವರಿ ಕನಸಿಗೆ ಜೀವ ತುಂಬಿದ ನಾಯಕ
ಚಿಕ್ಕನಾಯಕನಹಳ್ಳಿ ತಾಲೂಕಿನ ಬರಡಾದ ಭೂಮಿಗೆ ಜೀವ ತುಂಬಲು ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳು ಐತಿಹಾಸಿಕವಾಗಿವೆ. ಹೇಮಾವತಿ ನಾಲೆಯಿಂದ ತಾಲೂಕಿನ 26 ಪ್ರಮುಖ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 125 ಕೋಟಿ ರೂಪಾಯಿಗಳ ಬೃಹತ್ ಅನುದಾನ ನೀಡುವ ಮೂಲಕ ಈ ಭಾಗದ ಕೃಷಿಕರ ಬದುಕಿಗೆ ಚೈತನ್ಯ ನೀಡಿದರು. ಅಷ್ಟೇ ಅಲ್ಲದೆ, ಅಪ್ಪರ್ ಭದ್ರಾ ಯೋಜನೆಯ ಪ್ರಯೋಜನವು ಈ ಕ್ಷೇತ್ರಕ್ಕೆ ತಲುಪುವಂತೆ ಮಾಡುವಲ್ಲಿ ಅವರ ದೂರದೃಷ್ಟಿ ಬಹುದೊಡ್ಡದಿದೆ.
ಧಾರ್ಮಿಕ ಶ್ರದ್ಧೆ: ಮಠಮಾನ್ಯಗಳೊಂದಿಗೆ ಅವಿನಾಭಾವ ನಂಟು
ಬಿಎಸ್‌ವೈ ಅವರ ಬದುಕು ಕೇವಲ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಅವರು ಈ ಭಾಗದ ಧಾರ್ಮಿಕ ಕೇಂದ್ರಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಸಿದ್ಧಗಂಗಾ ಮಠದೊಂದಿಗಿನ ಅವರ ಭಕ್ತಿ ಇಡೀ ಜಿಲ್ಲೆಗೆ ತಿಳಿದಿದೆ. ವಿಶೇಷವಾಗಿ, ಚಿಕ್ಕನಾಯಕನಹಳ್ಳಿ ತಾಲೂಕಿನ ಸುಕ್ಷೇತ್ರ ಕುಪ್ಪೂರು ಮರಳು ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದ ಬಿಎಸ್‌ವೈ ಅವರು, ಅಲ್ಲಿನ ಶ್ರೀಗಳ ಆಶೀರ್ವಾದ ಪಡೆದು ಮಠದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ತಾಲೂಕಿನ ಪ್ರಮುಖ ಮಠಗಳಿಗೆ ಭೇಟಿ ನೀಡುವುದು ಮತ್ತು ಅಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದ ವಿಶೇಷ ನೆರವು ನೀಡುವುದರಲ್ಲಿ ಅವರು ಸದಾ ಉದಾರತೆ ತೋರಿದ್ದಾರೆ.
ಯುವ ಪೀಳಿಗೆಗೆ ಮಾರ್ಗದರ್ಶನ: ಅಣೇಕಟ್ಟೆ ರಾಕೇಶ್ ಶ್ಲಾಘನೆ
ಬಿಎಸ್‌ವೈ ಅವರ ಹೋರಾಟದ ಬದುಕಿನ ಬಗ್ಗೆ ಮಾತನಾಡುವ ಬಿಜೆಪಿ ಯುವ ಮುಖಂಡ ಅಣೇಕಟ್ಟೆ ರಾಕೇಶ್, "ಬಿಎಸ್‌ವೈ ಅವರು ನಮ್ಮಂತ ಯುವ ಕಾರ್ಯಕರ್ತರಿಗೆ ಅತಿದೊಡ್ಡ ಸ್ಫೂರ್ತಿ. ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವರ ಗುಣ ಮತ್ತು ಸಂಘಟನಾ ಶಕ್ತಿ ನಮಗೆ ಮಾದರಿ. ಅವರು ಹಾಕಿಕೊಟ್ಟ ಅಭಿವೃದ್ಧಿಯ ಹಾದಿಯಲ್ಲೇ ನಾವು ಸಾಗುತ್ತಿದ್ದೇವೆ," ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಚಿತ್ರದುರ್ಗದಲ್ಲಿ ಅಭಿಮಾನೋತ್ಸವ; ಮೇ 8ರಂದು ಮಿನಿ ದಸರಾ ಮಾದರಿಯಲ್ಲಿ ಬಿ.ಎಸ್.ಯಡಿಯೂರಪ್ಪ ಪುರಪ್ರವೇಶ
ಜನಸಂಘದ ಕಾಲದಿಂದಲೂ ಸೈಕಲ್ ಏರಿ ಹಳ್ಳಿ ಹಳ್ಳಿಗಳಲ್ಲಿ ಪಕ್ಷ ಸಂಘಟಿಸಿದ ಬಿಎಸ್‌ವೈ, ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿಯ ಭದ್ರಕೋಟೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಾಮಾನ್ಯ ಕಾರ್ಯಕರ್ತರನ್ನು ಹೆಸರು ಹಿಡಿದು ಕರೆಯುವ ಅವರ ಆಪ್ತತೆ ಮತ್ತು ಕ್ಷೇತ್ರದ ಮೇಲಿನ ಅವರ ಕಾಳಜಿ ಇಂದಿಗೂ ಈ ಭಾಗದ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಒಟ್ಟಾರೆಯಾಗಿ, 50 ವರ್ಷಗಳ ಈ ಸಾರ್ಥಕ ಜನಸೇವೆಯ ಪಯಣದಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರವು ಬಿಎಸ್‌ವೈ ಅವರ ದೂರದೃಷ್ಟಿಯಿಂದಾಗಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಈ ಬರಡು ಭೂಮಿಯಲ್ಲಿ ನೀರಾವರಿ ಕ್ರಾಂತಿ ಮಾಡಿದ ಅವರ ಹೆಸರು ಕ್ಷೇತ್ರದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಉಳಿಯುವುದರಲ್ಲಿ ಸಂಶಯವಿಲ್ಲ.