ಚಿಕ್ಕನಾಯಕನಹಳ್ಳಿ, ಏ. 30: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಏಪ್ರಿಲ್ 28ರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಬೆಸ್ಕಾಂ ಇಲಾಖೆಗೆ ಭಾರಿ ನಷ್ಟ ಉಂಟಾಗಿದ್ದು, (Chikkanayakanahalli News) ತಾಲೂಕಿನಾದ್ಯಂತ ಸುಮಾರು 100ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಕತ್ತಲಲ್ಲಿ ಮುಳುಗುವಂತಾಗಿದೆ. ಈ ಕುರಿತು ಬೆಸ್ಕಾಂ ಎಇಇ ಗವಿರಂಗಯ್ಯ ಮಾತನಾಡಿ, ʼʼಮಂಗಳವಾರ ರಾತ್ರಿಯ ಬಿರುಗಾಳಿಗೆ ತಾಲೂಕಿನ ವಿವಿಧೆಡೆ 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡೆಯಲು ಈಗಾಗಲೇ ನಮ್ಮ ಎಲ್ಲ ತಾಂತ್ರಿಕ ತಂಡಗಳನ್ನು ಕಾರ್ಯಕ್ಷೇತ್ರಕ್ಕೆ ಇಳಿಸಲಾಗಿದೆ. ಹೊಸ ಕಂಬಗಳ ಅಳವಡಿಕೆ ಮತ್ತು ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯ ಯುದ್ಧೋಪಾದಿಯಲ್ಲಿ ಸಾಗುತ್ತಿದೆʼʼ ಎಂದು ತಿಳಿಸಿದರು.
ಗ್ರಾಮೀಣ ಭಾಗದ ಮನೆಗಳಿಗೆ ವಿದ್ಯುತ್ ತೊಂದರೆಯಾಗದಂತೆ 'ನಿರಂತರ ಜ್ಯೋತಿ' ಮಾರ್ಗಗಳಿಗೆ ಮೊದಲ ಆದ್ಯತೆಯ ಮೇಲೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಮರಗಳು ಬಿದ್ದಿರುವ ಕಡೆಗಳಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಆಸ್ಪತ್ರೆಗಳು, ಕುಡಿಯುವ ನೀರಿನ ಪಂಪ್‌ಸೆಟ್‌ಗಳು ಮೊದಲ ಆದ್ಯತೆಯ ಮೇಲೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದ್ದು, ನಂತರ ಹಂತಹಂತವಾಗಿ ಎಲ್ಲಾ ಗ್ರಾಮೀಣ ಭಾಗಗಳಿಗೂ ವಿದ್ಯುತ್ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.
ʼʼಹಾನಿಯ ಪ್ರಮಾಣ ದೊಡ್ಡದಾಗಿರುವುದರಿಂದ ಸಂಪೂರ್ಣವಾಗಿ ವಿದ್ಯುತ್ ಸರಿಪಡಿಸಲು ಸ್ವಲ್ಪ ಸಮಯದ ಅವಶ್ಯಕತೆಯಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು. ಎಲ್ಲಾದರೂ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವುದು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಬೆಸ್ಕಾಂ ಕಚೇರಿ ಅಥವಾ ಸಹಾಯವಾಣಿಗೆ ಕರೆ ಮಾಡಬೇಕುʼʼ ಎಂದು ಎಇಇ ಗವಿರಂಗಯ್ಯ ಮನವಿ ಮಾಡಿದ್ದಾರೆ.
ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿ.ಕೆ. ಶಿವಕುಮಾರ್
ಬೆಳಗಿನ ಜಾವ 5 ಗಂಟೆಯವರೆಗೆ ಕಾರ್ಯಾಚರಣೆ: ಎಸ್‌ಒ ಇರ್ಫಾನ್
ಶೆಟ್ಟಿಕೆರೆ ಭಾಗದಲ್ಲಿ ಉಂಟಾಗಿದ್ದ ತೀವ್ರ ಹಾನಿಯ ಬಗ್ಗೆ ಸೆಕ್ಷನ್ ಆಫೀಸರ್ ಇರ್ಫಾನ್ ಮಾಹಿತಿ ನೀಡಿ, ʼʼಶೆಟ್ಟಿಕೆರೆ ಭಾಗದಲ್ಲಿ ಬಿರುಗಾಳಿಯ ಆರ್ಭಟಕ್ಕೆ ವಿದ್ಯುತ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು. ಹಾನಿಯ ತೀವ್ರತೆ ಹೆಚ್ಚಿದ್ದ ಕಾರಣ ಸಾರ್ವಜನಿಕರಿಗೆ ಬೇಗ ವಿದ್ಯುತ್ ನೀಡಬೇಕೆಂಬ ಉದ್ದೇಶದಿಂದ ನಮ್ಮ ತಂಡವು ಬುಧವಾರ ಬೆಳಗಿನ ಜಾವ 5 ಗಂಟೆಯವರೆಗೆ ಸತತವಾಗಿ ಕಾರ್ಯನಿರ್ವಹಿಸಿದೆ. ವಿಶ್ರಾಂತಿಯಿಲ್ಲದೆ ದುರಸ್ತಿ ಕಾರ್ಯ ನಡೆಸಿ ವಿದ್ಯುತ್ ಸಂಪರ್ಕ ಸರಿಪಡಿಸುವ ಪ್ರಯತ್ನ ಮಾಡಿದ್ದೇವೆʼʼ ಎಂದು ತಿಳಿಸಿದ್ದಾರೆ.