ಚಿಕ್ಕನಾಯಕನಹಳ್ಳಿ, ಜ.21: ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಾಡುಗೊಲ್ಲರ ಹಟ್ಟಿಗಳ ಅಭಿವೃದ್ಧಿ ಹಾಗೂ ಸಮುದಾಯದಲ್ಲಿ ಅರಿವು ಮೂಡಿಸುವ ಸಲುವಾಗಿ, ನೆಲಮಂಗಲ ತಾಲೂಕಿನ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಬಸವರಾಮಾನಂದ ಮಹಾಸ್ವಾಮೀಜಿ ಅವರು ಇದೇ ಜನವರಿ 27 ರಿಂದ ಏಳು ದಿನಗಳ ಕಾಲ ತಾಲೂಕಿನ ವಿವಿಧ ಗ್ರಾಮಗಳ ಹಟ್ಟಿಗಳಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪಟ್ಟಣದ (Chikkanayakanahalli News) ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ‘ಪೂಜ್ಯರ ನಡೆ ಭಕ್ತರ ಮನೆ-ಮನಗಳ ಕಡೆʼ ಎಂಬ ಅಭಿಯಾನದ ಮಾರ್ಗಸೂಚಿಯನ್ನು ಪ್ರಕಟಿಸಿದರು.
ಸಭೆಯಲ್ಲಿ ಮಾತನಾಡಿದ ಶ್ರೀಗಳು, "ಹಟ್ಟಿಗಳಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಕೆಲವು ಪದ್ಧತಿಗಳ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸುವುದು ಮತ್ತು ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ಪ್ರಮುಖ ಗುರಿ. ಸಂಘಟನೆ, ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್ ಓದುವ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಬಗ್ಗೆ ಈ ಪ್ರವಾಸದಲ್ಲಿ ಜಾಗೃತಿ ಮೂಡಿಸಲಾಗುವುದು. ಹಟ್ಟಿಗಳ ಜನರ ಭಕ್ತಿಯನ್ನು ಸಾತ್ವಿಕ ಗುಣಗಳಾಗಿ ಪರಿವರ್ತಿಸಿ, ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವುದು ನಮ್ಮ ಉದ್ದೇಶ" ಎಂದು ತಿಳಿಸಿದರು.
ದಾಸೋಹಕ್ಕಾಗಿ ಧಾನ್ಯ ಸಂಗ್ರಹ
ಫೆಬ್ರವರಿ 26ರಿಂದ ಆರಂಭವಾಗಲಿರುವ ವನಕಲ್ಲು ಮಲ್ಲೇಶ್ವರ ಜಾತ್ರೆಯ ಅಂಗವಾಗಿ ಈ ಪಾದಯಾತ್ರೆ ನಡೆಯುತ್ತಿದ್ದು, ಭೇಟಿಯ ವೇಳೆ ಭಕ್ತರು ನೀಡುವ ಆಹಾರ ಧಾನ್ಯಗಳನ್ನು ಮಠದ ಗೋಶಾಲೆ, ಸಂಶೋಧನಾ ಕೇಂದ್ರ, ಅನಾಥ ಮಕ್ಕಳ ಪಾಠಶಾಲೆ ಹಾಗೂ ವೃದ್ಧಾಶ್ರಮದ ದಾಸೋಹಕ್ಕೆ ಬಳಸಿಕೊಳ್ಳಲಾಗುವುದು ಎಂದು ಶ್ರೀಗಳು ವಿವರಿಸಿದರು.
ಕೆಂಪರಾಯನಹಟ್ಟಿ ಮಂಜುನಾಥ್ ಮಾತನಾಡಿ, "ಗೊಲ್ಲರಹಟ್ಟಿಗಳ ಯುವಜನತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಮುದಾಯದ ಏಳಿಗೆಗಾಗಿ ರಾಜಕೀಯ ಮುಖಂಡರು ಮತ್ತು ಗ್ರಾಮಸ್ಥರು ಪಕ್ಷಾತೀತವಾಗಿ ಶ್ರೀಗಳ ಈ ಪಾದಯಾತ್ರೆಗೆ ಸಹಕರಿಸಬೇಕು" ಎಂದು ಮನವಿ ಮಾಡಿದರು.
ಮಧುಗಿರಿಯ ಶ್ರೀ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ; ಜ.22 ರಿಂದ ಫೆ. 4 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ
ಈ ಸಂದರ್ಭದಲ್ಲಿ ಮುಖಂಡರಾದ ಮಾದಾಪುರ ಶಿವಣ್ಣ, ರಾಮಪ್ಪನಹಟ್ಟಿ ಮಲ್ಲಿಕಾರ್ಜುನ್, ವಿಶ್ವನಾಥ್ ಪೂಜಾರಿ, ಕದುರೇಗೌಡ, ಅಜ್ಜಪ್ಪ, ಲೋಕೇಶ್, ಈರಣ್ಣ, ರಮೇಶ್, ಆಟೋ ಶಂಕರ್, ರಾಮಣ್ಣ, ಚಿತ್ರಲಿಂಗಪ್ಪ, ರವಿಕುಮಾರ್, ಮೋಹನ್, ಸುಧಾಕರ್, ಶೇಷಣ್ಣ ಪೂಜಾರಿ, ಅಂಕಸಂದ್ರ ನಟರಾಜ್, ರಾಜಣ್ಣ ಸುನಂದಾ ಸೇರಿದಂತೆ ನೂರಾರು ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಬೆಂಬಲ ಸೂಚಿಸಿದರು.