ಚಿಕ್ಕನಾಯಕನಹಳ್ಳಿ, ಮೇ 14: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿ.ಎ.ಪಿ.ಸಿ.ಎಂ.ಎಸ್) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆಯಲಿರುವ ಚುನಾವಣಾ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದ್ದು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್‌ಕುಮಾರ್ ಅವರ ನೇತೃತ್ವದಲ್ಲಿ ಗುರುವಾರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಮೇ 14 ರಿಂದ ಮೇ 16ರವರೆಗೆ ನಿಗದಿಪಡಿಸಲಾಗಿದ್ದ ನಾಮಪತ್ರ ಸಲ್ಲಿಕೆ ಅವಧಿಯಲ್ಲಿ, ಸಹಕಾರ ಸಂಘದ ಆಡಳಿತ ಚುಕ್ಕಾಣಿ ಹಿಡಿಯಲು ವಿವಿಧ ಕ್ಷೇತ್ರಗಳಿಂದ ಪ್ರಮುಖ ಮುಖಂಡರು ಉತ್ಸಾಹ ತೋರಿದ್ದು, ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣಾ ಕಣದಲ್ಲಿರುವ ಆಕಾಂಕ್ಷಿಗಳಾದ ಸಿ.ಎಸ್. ಶಿಲ್ಪ, ಶಶಿ ಶೇಖರ್, ಶೈಲಾ, ಬೋವಿ ಸಮಾಜದ ತಾಲೂಕು ಅಧ್ಯಕ್ಷರಾದ ಮೈಲಕಬ್ಬೆ ಹನುಮಂತಯ್ಯ, ನಾಗರಾಜ್, ಚಂದ್ರಶೇಖರಯ್ಯ, ಮಲ್ಲಿಕಾರ್ಜುನಯ್ಯ ಹಾಗೂ ಗಂಗಾಧರಯ್ಯ ಸೇರಿದಂತೆ ವಿವಿಧ ಅಭ್ಯರ್ಥಿಗಳು ಚುನಾವಣಾ ಕಣ ಪ್ರವೇಶಿಸಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರ, ವೈಯಕ್ತಿಕ ಸದಸ್ಯರ ಕ್ಷೇತ್ರ ಹಾಗೂ ವಿವಿಧ ಮೀಸಲಾತಿ ಅನ್ವಯ ಈ ನಾಮಪತ್ರಗಳು ಸಲ್ಲಿಕೆಯಾಗಿವೆ.
ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 18ರಂದು ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅಂತಿಮವಾಗಿ ಕಣದಲ್ಲಿ ಸ್ಪರ್ಧೆ ಏರ್ಪಟ್ಟಲ್ಲಿ ಮೇ 24ರಂದು ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯಲಿದೆ. ತಾಲೂಕಿನ ಪ್ರತಿಷ್ಠಿತ ಸಹಕಾರ ಸಂಘದ ಚುನಾವಣೆ ಇದಾಗಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಂಘದ ಅಭಿವೃದ್ಧಿ ಹಾಗೂ ರೈತರ ಹಿತರಕ್ಷಣೆಯ ಆಶಯದೊಂದಿಗೆ ಅಭ್ಯರ್ಥಿಗಳು ಮತದಾರರ ವಿಶ್ವಾಸ ಗಳಿಸಲು ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದಾರೆ.