ತುಮಕೂರು, ಅ.20: ತುಮಕೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಗರದ ಸ್ವಚ್ಛತೆಗೆ ಶ್ರಮಿಸಿದ ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸುವ ನೆಪದಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ತಮಗೆ ತೀವ್ರ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪೌರಕಾರ್ಮಿಕರು ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಸರಾ ಕಾರ್ಯಕ್ರಮಗಳು ಮತ್ತು ನಗರ ಸ್ವಚ್ಛತೆಯಲ್ಲಿ ನಿರಂತರವಾಗಿ ಶ್ರಮಿಸಿದ ಪೌರಕಾರ್ಮಿಕರನ್ನು ಗೌರವಿಸಿ, ಸನ್ಮಾನಿಸುತ್ತೇವೆ ಎಂದು ಕಾರ್ಯಕ್ರಮದ ಸ್ಥಳಕ್ಕೆ ಕರೆಸಲಾಗಿತ್ತು. ಆದರೆ, ಸ್ಥಳಕ್ಕೆ ತಲುಪಿದ ಬಳಿಕ ಇನ್ಸ್ಪೆಕ್ಟರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ "ಎದ್ದೇಳ್ರೋ ಎದ್ದೇಳ್ರೋ ಮ್ಯಾಕೆ, ದಬ್ಬಿದ್ದಾರೆ" ಎಂದು ಏಕವಚನದಲ್ಲಿ ನಿಂದಿಸಿ, ಸ್ಥಳದಿಂದ ಕಳುಹಿಸಲು ಯತ್ನಿಸಿದ್ದಾರೆ ಎಂದು ಪೌರಕಾರ್ಮಿಕರು ದೂರಿದ್ದಾರೆ.
'ನಮಗೆ ಇಂತಹ ಸನ್ಮಾನ ಬೇಡ'
"ನಾವು ನಗರದ ಕಸ ಬಳಿದು, ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿದ್ದೇವೆ. ಸನ್ಮಾನ ಮಾಡುವುದಿದ್ದರೆ ಗೌರವಯುತವಾಗಿ ಮಾಡಲಿ, ಬದಲಿಗೆ ಎಲ್ಲರೆದುರು ನಮಗೆ ಈ ರೀತಿ ಸನ್ಮಾನದ ಹೆಸರಿನಲ್ಲಿ ಧಮ್ಕಿ ಹಾಕಿ ಕಳುಹಿಸುವುದು ನಮಗೆ ಮಾಡಿದ ದೊಡ್ಡ ಅವಮಾನ. ನಮಗೆ ಈ ಸನ್ಮಾನವೂ ಬೇಡ, ಇಂತಹ ಯಾವುದೇ ಪ್ರಶಸ್ತಿಯೂ ಬೇಡ" ಎಂದು ಪೌರಕಾರ್ಮಿಕರು ತಮ್ಮ ಕಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆತ್ಮಸ್ವಾಭಿಮಾನಕ್ಕೆ ಧಕ್ಕೆ
ತಾವು ಮಹಾನಗರ ಪಾಲಿಕೆಯ ಅಧಿಕೃತ ಕಾರ್ಮಿಕರಾಗಿದ್ದು, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಹೆಲ್ತ್ ಇನ್ಸ್ಪೆಕ್ಟರ್ಗಳಾಗಲಿ, ದಫೇದಾರರಾಗಲಿ ಅಥವಾ ಪೊಲೀಸ್ ಅಧಿಕಾರಿಗಳಾಗಲಿ ಪೌರಕಾರ್ಮಿಕರೆಂದರೆ ಕೇವಲವಾಗಿ ಕಾಣುತ್ತಿದ್ದಾರೆ. ನಮ್ಮ ಆತ್ಮಸ್ವಾಭಿಮಾನಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳುವ ಅಧಿಕಾರಿಗಳ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಸೂಕ್ತ ಭರವಸೆ ಮತ್ತು ಭದ್ರತೆಗೆ ಒತ್ತಾಯ
ಇನ್ನು ಮುಂದೆ ಕರ್ತವ್ಯ ನಿರತ ಪೌರಕಾರ್ಮಿಕರಿಗೆ ಪೊಲೀಸ್ ಸಿಬ್ಬಂದಿಯಿಂದಾಗಲಿ ಅಥವಾ ಇಲಾಖಾ ಮೇಲಧಿಕಾರಿಗಳಿಂದಾಗಲಿ ಯಾವುದೇ ರೀತಿಯ ತೊಂದರೆ, ನಿಂದನೆ ಅಥವಾ ಕಿರುಕುಳ ಆಗಬಾರದು. ಮೇಲಧಿಕಾರಿಗಳು ನಮಗೆ ಸ್ಪಷ್ಟ ಲಿಖಿತ ಭರವಸೆ ನೀಡಬೇಕು ಹಾಗೂ ಈ ರೀತಿ ಅವಮಾನಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೌರಕಾರ್ಮಿಕರು ಪಟ್ಟು ಹಿಡಿದಿದ್ದಾರೆ.