ತುಮಕೂರು: ಜನರ ಮನೆ ಬಾಗಿಲಿಗೆ ಸರ್ಕಾರ ಎಂಬ ಆಶಯದಡಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರಜಾಸೇವಾ ಇಲಾಖೆ (Prajaseva Department) ಇಂದು ರಾಜ್ಯಾದ್ಯಂತ ಕಾರ್ಯಾರಂಭ ಮಾಡಿದೆ. ಮುಖ್ಯಮಂತ್ರಿಗಳು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಪ್ರಜಾಸೇವಾ ಇಲಾಖೆಗೆ ಚಾಲನೆ ನೀಡಿದರೆ, ಅದೇ ಸಮಯಕ್ಕೆ ಮಾನ್ಯ ಉಪಮುಖ್ಯಮಂತ್ರಿಗಳು, ಕ್ರೀಡಾ ಹಾಗೂ ಕಂದಾಯ ಸಚಿವರು ಡಾ.ಜಿ.ಪರಮೇಶ್ವರ (DCM G. Parameshwar) ತಮ್ಮ ತವರು ಜಿಲ್ಲೆಯಾದ ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ಮೂಲಕ ಪ್ರಜಾಸೇವಾ ಅಭಿಯಾನವನ್ನು (Praja Seva campaign) ಉದ್ಘಾಟಿಸಿದರು.
ಪ್ರಜಾಸೇವಾ ಇಲಾಖೆಯ ಲೋಕಾರ್ಪಣೆ ಹಾಗೂ ಪ್ರಜಾಸೇವಾ ಅಭಿಯಾನ ಜನಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಉಪಮುಖ್ಯಮಂತ್ರಿಗಳು, ಕಂದಾಯ ಹಾಗೂ ಕ್ರೀಡಾ ಸಚಿವರಾದ ಡಾ.ಜಿ.ಪರಮೇಶ್ವರ ಅವರು ವಿಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದರು.
ಪ್ರಜಾಸೇವಾ ಇಲಾಖೆಯ ತುಮಕೂರು ಜಿಲ್ಲಾ ಕಾರ್ಯಕ್ರಮವನ್ನು ಇಂದು ಗುಬ್ಬಿ ತಾಲೂಕಿನಲ್ಲಿ ಆಯೋಜಿಸಲಾಗಿದೆ ಎಂದ ಅವರು, ಜನಸೇವೆಯ ಇಚ್ಛಾಶಕ್ತಿಯಿಂದ ಈ ಕಾರ್ಯಕ್ರಮವನ್ನು ಪರಿಚಯಿಸಿರುವ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಎಲ್ಲ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಶಾಸಕರು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಿ ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದಾರೆ.

ಗುಬ್ಬಿ ಕ್ಷೇತ್ರದ ಶಾಸಕರು ಹೆಚ್ಚು ಕ್ರಿಯಾಶೀಲರಾಗಿರುವುದರಿಂದ ಗುಬ್ಬಿ ತಾಲೂಕಿನಿಂದಲೇ ನಾವು ತುಮಕೂರು ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದರೆ ಅತಿಹೆಚ್ಚು ಜನರಿಗೆ ತಲುಪಲು ಸಾಧ್ಯವಾಗುತ್ತದೆ ಎಂದು ಇಲ್ಲಿ ಆಯೋಜಿಸಲಾಗಿದೆ ಎಂದು ಸ್ಥಳೀಯ ಶಾಸಕರನ್ನು ಡಿಸಿಎಂ ಶ್ಲಾಘಿಸಿದರು.
ಸಾವಿರಾರು ಮಂದಿಯಿಂದ ಅಹವಾಲು ಸಲ್ಲಿಕೆ
ಗುಬ್ಬಿಯಲ್ಲಿ ಆಯೋಜನೆ ಮಾಡಲಾಗಿರುವ ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದ ಸಾವಿರಾರು ಜನರು ಪಾಲ್ಗೊಂಡಿದ್ದು 11 ಗಂಟೆಯ ಹೊತ್ತಿಗಾಗಲೇ 1 ಸಾವಿರ ಜನರ ಅಹವಾಲುಗಳನ್ನು ಖುದ್ದಾಗಿ ಸ್ವೀಕರಿಸಿ, ರುಜು ಹಾಕಿ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅರ್ಜಿ ನೀಡಿದ ಜನರ ಕೆಲಸಗಳನ್ನು ಕಡೆಗಣಿಸಿ ವಿಳಂಬ ಮಾಡಿದ ವಿಚಾರ ನನ್ನ ಗಮನಕ್ಕೆ ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದೇನೆ. ಜನರ ಸಮಸ್ಯೆಗಳು ತ್ವರಿತಗತಿಯಲ್ಲಿ ಪರಿಹಾರವಾಗಬೇಕು ಮತ್ತು ಅರ್ಜಿಗಳನ್ನು ಹಿಡಿದು ಸಾರ್ವಜನಿಕರು ಸರ್ಕಾರಿ ಕಛೇರಿಗಳಿಗೆ ಅಲೆಯಬಾರದು ಎಂಬುದೇ ಈ ಕಾರ್ಯಕ್ರಮದ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಈ ಕಾರ್ಯಕ್ರಮದ ನಂತರವೂ ಜನರ ಮತ್ತದೇ ಅರ್ಜಿಗಳನ್ನು ಹಿಡಿದು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾದರೆ, ಅದು ಈ ಕಾರ್ಯಕ್ರಮದ ವೈಫಲ್ಯವಾಗಲಿದೆ ಎಂದು ಹೇಳಿದ ಅವರು, ಹೀಗಾಗಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು.

ಬಡವರಿಗೆ 15 ಲಕ್ಷ ನಿವೇಶನ ಮಂಜೂರು
ಬಹಳಷ್ಟು ಜನ ತಮ್ಮೂರಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಹೊತ್ತು ಬಂದಿದ್ದಾರೆ. ಇನ್ನು ಹಲವರು ಕಂದಾಯ ಇಲಾಖೆಯಲ್ಲಿ ತಮಗೆ ಆಗಬೇಕಿರುವ ಕೆಲಸದ ಬಗ್ಗೆ ಅರ್ಜಿಗಳನ್ನು ನೀಡಿದ್ದಾರೆ. ನಿವೇಶನಗಳನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ನಿಮ್ಮ ಆದೇಶದಂತೆ ರಾಜ್ಯಾದ್ಯಂತ ಬಡಜನರಿಗೆ 15 ಲಕ್ಷ ನಿವೇಶನಗಳನ್ನು ಮಂಜೂರು ಮಾಡಲು ನಮ್ಮ ಸರ್ಕಾರ ಮುಂದಾಗಿದೆ. ಕಂದಾಯ ಇಲಾಖೆ ವತಿಯಿಂದ ಊರುಗಳಿಗೆ ಹೊಂದಿಕೊಂಡಿರುವ ಸರ್ಕಾರಿ ಜಾಗಗಳಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ ಮುಂಬರುವ ಡಿಸೆಂಬರ್ ತಿಂಗಳ ಒಳಗಾಗಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ವರ್ಷಾಂತ್ಯಕ್ಕೆ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂಬ ಗುರಿಯನ್ನು ಹೊಂದಲಾಗಿದೆ. ಆ ಪೈಕಿ ಈಗಾಗಲೇ ಸಾವಿರಾರು ನಿವೇಶನಗಳು ಸಿದ್ಧಗೊಂಡಿದ್ದು, ಈ ಬಗ್ಗೆ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಎರಡು ಬಾರಿ ಸಭೆ ನಡೆಸಿ ಸೂಚನೆಯನ್ನು ಕೂಡ ನೀಡಿರುವುದಾಗಿ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದರು.
ಎರಡನೇ ಹಂತದಲ್ಲಿ ಒಟ್ಟು 50 ಬರ ಪೀಡಿತ ತಾಲೂಕುಗಳ ಘೋಷಣೆ
ಈ ಬಾರಿ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಇದೆ. ಜಿಲ್ಲೆಯ ಒಟ್ಟು ಹತ್ತು ತಾಲೂಕುಗಳ ಪೈಕಿ ಮೊದಲ ಹಂತದಲ್ಲಿ 9 ತಾಲೂಕುಗಳಲ್ಲಿ ಬರಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಎರಡನೇ ಹಂತದಲ್ಲಿ ಉಳಿದ ತಿಪಟೂರು ತಾಲೂಕನ್ನು ಕೂಡ ಬರಪೀಡಿತ ತಾಲೂಕು ಎಂದು ಪರಿಗಣಿಸಲಾಗಿದೆ. ಹೀಗಾಗಿ ಜಿಲ್ಲೆಯ ಒಟ್ಟು 10 ತಾಲೂಕುಗಳಲ್ಲಿ ಬರಪರಿಸ್ಥಿತಿ ತೀವ್ರವಾಗಿದೆ. ಅಂತೆಯೇ ರಾಜ್ಯದಲ್ಲಿ ಮೊದಲ ಹಂತದಲ್ಲಿ 101 ತಾಲೂಕುಗಳಲ್ಲಿ ಬರಪರಿಸ್ಥಿತಿ ಘೋಷಿಸಲಾಗಿದೆ.
ಎರಡನೇ ಹಂತದಲ್ಲಿ ಈಗಾಗಲೇ 25 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇನ್ನೂ 25 ತಾಲೂಕುಗಳು ಸೇರ್ಪಡೆಯಾಗಲಿವೆ. ಎರಡನೇ ಹಂತದಲ್ಲಿ ಒಟ್ಟು 50 ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಿದ್ದೇವೆ ಎಂಬ ಮಾಹಿತಿಯನ್ನು ತಿಳಿಸಿದರು.
ರಾಜ್ಯದಲ್ಲಿ ಬರಪರಿಸ್ಥಿತಿ ಬಹಳ ಭೀಕರವಾಗಿದೆ. ಈಗಾಗಲೇ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಈ ಹಿನ್ನೆಲೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಮತ್ತು ಸ್ಥಳೀಯ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಪೂರೈಸುವ ಕೆಲಸವನ್ನು ಮಾಡಲಾಗುತ್ತಿದೆ. ನೀರಿನ ಆಗರಗಳಿದ್ದ ಕಡೆಗಳಲ್ಲಿ ಜಲ ಜೀವನ್ ಮಿಶನ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸೂಚನೆಯನ್ನು ನೀಡಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಜಾನುವಾರುಗಳಿಗೆ ಸೀಮಿತ ಪ್ರಮಾಣದಲ್ಲಿ ಮೇವಿನ ಸಂಗ್ರಹವಿದೆ. ಒಂದು ವೇಳೆ ಈ ಸಂಗ್ರಹ ಖಾಲಿಯಾದರೆ ಸಂಕಷ್ಟ ಎದುರಾಗಲಿದೆ. ಈ ಹಿನ್ನೆಲೆ ಈಗಾಗಗಲೇ ಕೆಎಂಎಫ್ ವತಿಯಿಂದ ರೈತರಿಗೆ ಮೇವಿನ ಬೀಜದ ಕಿಟ್ ಗಳನ್ನು ವಿತರಿಸಲಾಗಿದೆ. ಅದೇ ರೀತಿ ಮೇವಿನ ಬೀಜಗಳ ವಿತರಣೆಯ ಉದ್ದೇಶಕ್ಕೆ ಪಶು ಸಂಗೋಪನಾ ಇಲಾಖೆಗೆ ಮಂಜೂರು ಮಾಡಲಾಗಿರುವ ಅನುದಾನವನ್ನು ಬಳಸಿಕೊಂಡು ಟೆಂಡರ್ ಕರೆದು ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮೇವು ಬೆಳೆಯುವಂತೆ ರೈತರಲ್ಲೂ ಮನವಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ರೈತರು ಬೆಳೆದ ಮೇವನ್ನು ಸೂಕ್ತ ದರ ನಿಗದಿ ಮಾಡಿ ಸರ್ಕಾರವೇ ಖರೀದಿ ಮಾಡುವುದು ಎಂದು ಭರವಸೆ ನೀಡಲಾಗಿದೆ ಎಂದು ಜಿಲ್ಲೆ ಮತ್ತು ರಾಜ್ಯದಲ್ಲಿನ ಬರ ಪರಸ್ಥಿತಿ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು.
ಉತ್ತರ ಕರ್ನಾಟಕದಲ್ಲಿ ಪರಿಸ್ಥಿತಿ ತೀವ್ರ
ಬರಪರಿಸ್ಥಿತಿಯಿಂದ ಜನಗಳು ಊರುಬಿಟ್ಟು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದ ಡಿಸಿಎಂ ಪರಮೇಶ್ವರ ಅವರು, ಉತ್ತರ ಕರ್ನಾಟಕದಲ್ಲಿ ಈ ಪರಿಸ್ಥಿತಿ ತೀವ್ರವಾಗಿದೆ. ತುಮಕೂರು ಜಿಲ್ಲೆಯಲ್ಲಿ ಇನ್ನೂ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ. ಆದ್ದರಿಂದ ರಾಜ್ಯದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಮೂಲಕ ಜನರಿಗೆ ಅವರ ಊರುಗಳಲ್ಲಿಯೇ ಉದ್ಯೋಗದ ಖಾತ್ರಿ ಒದಗಿಸಿ ಗುಳೆ ಹೋಗುವುದನ್ನು ತಪ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
Lakshmi Hebbalkar: ರಾಜ್ಯದ ಸಮಸ್ಯೆಗಳ ಚರ್ಚೆ ಬಿಟ್ಟು ಬಿಜೆಪಿ ರಾಜಕಾರಣ ಮಾಡುತ್ತಿದೆ: ಲಕ್ಷ್ಮೀ ಹೆಬ್ಬಾಳಕರ್
ಪ್ರಜಾಸೇವಾ ಕಾರ್ಯಕ್ರಮ ತುಮಕೂರು ಜಿಲ್ಲೆಯಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದ ಉಪಮುಖ್ಯಮಂತ್ರಿಗಳು ಜಿಲ್ಲೆಯ 9 ಹೋಬಳಿಗಳಲ್ಲಿ ಜನರು ಏಕಕಾಲಕ್ಕೆ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ತಾಲ್ಲೂಕು ಮಟ್ಟದಿಂದ ಹೋಬಳಿ ಮಟ್ಟಕ್ಕೆ ಕೊಂಡೊಯ್ಯಲಾಗುವುದು. ಆ ಮೂಲಕ ತಾಲ್ಲೂಕಿನ ವರೆಗೆ ಬರಲಾಗದ ಅಸಹಾಯಕ ಜನರ ಮನೆ ಬಾಗಲಿಗೆ ಸರ್ಕಾರದ ಸೇವೆಗಳನ್ನು ತ್ವರಿತಗತಿಯಲ್ಲಿ ತಲುಪಿಸಲಾಗುವುದು ಎನ್ನುವ ವಾಗ್ದಾನವನ್ನು ನೀಡಿದರು.