ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

DK Shivakumar: ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ: ಡಿ.ಕೆ.ಶಿವಕುಮಾರ್

DK Shivakumar: ತುಮಕೂರಿಗೆ ಹೆಚ್ಚಿನ ಶಕ್ತಿ ತುಂಬಲು, ಸ್ಯಾಟಲೈಟ್ ಟೌನ್ ಜತೆಗೆ, ಅಂತರನಗರ ರೈಲು ಹಾಗೂ ಮೆಟ್ರೋ ರೈಲು ನೀಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಕಲ್ಪತರು ನಾಡು ತುಮಕೂರು ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ ದೊಡ್ಡ ಪರಂಪರೆ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ತುಮಕೂರು: ಬೆಂಗಳೂರಿನಂತೆ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಅನೇಕ ಯೋಜನೆ ರೂಪಿಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar)‌ ತಿಳಿಸಿದರು. ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಸಚಿವ ಕೆ.ಎನ್. ರಾಜಣ್ಣ ಅವರ 75ನೇ ಜನ್ಮದಿನ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, ತುಮಕೂರಿಗೆ ಹೆಚ್ಚಿನ ಶಕ್ತಿ ತುಂಬಲು, ಸ್ಯಾಟಲೈಟ್ ಟೌನ್ ಜತೆಗೆ, ಅಂತರನಗರ ರೈಲು ಹಾಗೂ ಮೆಟ್ರೋ ರೈಲು ನೀಡಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಕಲ್ಪತರು ನಾಡು ತುಮಕೂರು ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ ದೊಡ್ಡ ಪರಂಪರೆ ಇದೆ ಎಂದು ಹೇಳಿದರು.

ರಾಜಣ್ಣ ನೇರ ನುಡಿ ಸ್ವಾಭಿಮಾನದ ನಾಯಕ

ಇದು ಐತಿಹಾಸಿಕ ಜನ್ಮದಿನ ಕಾರ್ಯಕ್ರಮ. ನೇರ ನುಡಿ ಸ್ವಾಭಿಮಾನದ ನಾಯಕ ರೈತಾಪಿ ಜನರ ಬದುಕು ಸುಧಾರಣೆಯ ಗುರಿ ಹೊಂದಿರುವ, ಆತ್ಮೀಯ ಸ್ನೇಹಿತನ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ರಾಜಣ್ಣ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಜನರ ಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ರೈತನಿಗೆ ಲಂಚ, ಬಡ್ತಿ, ನಿವೃತ್ತಿ, ಪಿಂಚಣಿ ಇಲ್ಲ. ರೈತರ ಹಿತಕ್ಕಾಗಿ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಶಕ್ತಿ ನೀಡುತ್ತಿದ್ದೇವೆ. ರಾಜಣ್ಣ ಅವರು ಬಹಳ ಆಸಕ್ತಿಯಿಂದ ಈ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದಾರೆ. ನಾನು ಕೂಡ ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ ಸಹಕಾರ ಸಚಿವನಾಗಿದ್ದಾಗ, ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಹಾಗೂ ಷಡಕ್ಷರಿ ಅವರನ್ನು ಎಸ್‌ಎಲ್‌ಡಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು ಎಂದು ಸ್ಮರಿಸಿದರು.

ಕೊಟ್ಟ ಮಾತಿನಂತೆ ನಡೆದಿದ್ದೇವೆ

ರೈತರ ಬದುಕು ಬದಲಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಕೊಟ್ಟ ಮಾತಿನಂತೆ ನಡೆದು ಜನರ ಆಶೋತ್ತರ ಈಡೇರಿಸಿದ್ದೇವೆ. 2027ರ ಒಳಗಾಗಿ ಎತ್ತಿನಹೊಳೆ ನೀರನ್ನು ತುಮಕೂರು ಮಾರ್ಗವಾಗಿ ಹರಿಸಲು ತೀರ್ಮಾನಿಸಿದ್ದೇವೆ. ಕುಡಿಯುವ ನೀರು ಪೂರೈಸಿದ ನಂತರ ಕೆರೆ ತುಂಬಿಸಲಾಗುವುದು ಎಂದು ಭರವಸೆ ನೀಡಿದರು.

ನಾವು ನಿಮಗೆ ನುಡಿದಂತೆ ನಡೆದಿದ್ದು, ನಮಗೆ ನಿಮ್ಮ ಆಶೀರ್ವಾದ ಬೇಕು. ನೀವು ಎಲ್ಲಿಯವರೆಗೂ ಆಶೀರ್ವಾದ ಮಾಡುತ್ತೀರೋ ಅಲ್ಲಿಯವರೆಗೆ ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ. ನಾವು ಪರಮೇಶ್ವರ್ ಅವರ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿ ರಚಿಸಿದ್ದೆವು. ನಮ್ಮ ಸರ್ಕಾರ 2 ವರ್ಷದಲ್ಲೇ 70% ಪ್ರಣಾಳಿಕೆಯಲ್ಲಿರುವ ಭರವಸೆ ಪೂರ್ಣಗೊಳಿಸಿದ್ದೇವೆ. ನಮ್ಮ ಈ ಹಿಂದಿನ ಸರ್ಕಾರದಲ್ಲಿ 165 ಭರವಸೆಗಳ ಪೈಕಿ 145ಕ್ಕೂ ಹೆಚ್ಚಿನ ಭರವಸೆ ಈಡೇರಿಸಿದ್ದೆವು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | DK Shivakumar: ಬಿ.ಆರ್. ಪಾಟೀಲ್ ಯಾವ ಉದ್ದೇಶದಲ್ಲಿ ಹೇಳಿದ್ದಾರೋ ಅದು ಸರಿ ಇಲ್ಲ, ನಾನಿದನ್ನು ಖಂಡಿಸುತ್ತೇನೆ: ಡಿ.ಕೆ.ಶಿವಕುಮಾರ್

ನಮ್ಮ ಗ್ಯಾರಂಟಿ ಹಾಗೂ ಎಲ್ಲಾ ಇಲಾಖೆಗಳಲ್ಲಿನ ಅಭಿವೃದ್ಧಿ ಯೋಜನೆ ದೇಶಕ್ಕೆ ಮಾದರಿಯಾಗಿದೆ. 4 ಲಕ್ಷ ಕೋಟಿಗೂ ಹೆಚ್ಚಿನ ಬಜೆಟ್ ಮಂಡಿಸಿ ಎಲ್ಲಾ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ವಿಜಯನಗರದಲ್ಲಿ 1,11,111 ಮಂದಿ ತಾಂಡಾ, ಬುಡಕಟ್ಟು ಜನರಿಗೆ, ಆರನೇ ಗ್ಯಾರಂಟಿ ಭೂ ಗ್ಯಾರಂಟಿ ಮೂಲಕ ಭೂಮಿ ದಾಖಲೆ ಉಚಿತವಾಗಿ ಹಂಚಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.