ತುಮಕೂರು, ಜ.24: ಹೊಸ ಇ-ಪೌತಿ ಸಾಫ್ಟ್‌ವೇರ್ ಅಳವಡಿಕೆಯ ಕಾರಣದಿಂದ ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ (Tumkur News) ಕಾರ್ಪೊರೇಷನ್ ವ್ಯಾಪ್ತಿಯ ಎಲ್ಲಾ ಇ-ಖಾತಾಗಳನ್ನು ಕಳೆದ 45 ದಿನಗಳಿಂದ ಏಕಾಏಕಿ ಸ್ಥಗಿತಗೊಳಿಸಿರುವುದರಿಂದ ಡೆವಲಪರ್ಸ್, ನಾಗರಿಕರು ಮತ್ತು ಹೂಡಿಕೆದಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಲ್ಯಾಂಡ್ ಡೆವಲಪರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಸ್ಫೂರ್ತಿ ಚಿದಾನಂದ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇ-ಖಾತಾ ಸ್ಥಗಿತದಿಂದ ಬ್ಯಾಂಕ್‌ನಿಂದ ಸಾಲ ಸೌಲಭ್ಯ ದೊರೆಯದೆ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸಿಸಿ ಹಾಗೂ ಒಸಿ ಪಡೆಯುವ ಪ್ರಕ್ರಿಯೆ ಸುಮಾರು 2 ವರ್ಷಗಳಿಂದ ವಿಳಂಬವಾಗುತ್ತಿದೆ ಎಂದು ದೂರಿದರು.
ಬಿಲ್ಡಿಂಗ್ ಲೈಸೆನ್ಸ್‌ಗಳು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಆಗದೇ ಇರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ತಡೆ ಉಂಟಾಗಿದೆ. ಪೂರ್ಣಗೊಂಡಿರುವ ರೆಸೆಡೆನ್ಶಿಯಲ್ ಲೇಔಟ್ ಫ್ಲಾಟ್‌ಗಳಿಗೆ ಲೈಸೆನ್ಸ್ ನೀಡುವಲ್ಲಿ ಅಧಿಕಾರಿಗಳ ವಿಳಂಬ ಧೋರಣೆ ವರ್ತನೆ ಡೆವಲಪರ್ಸ್‌ಗಳಿಗೆ ಸಂಕಷ್ಟ ತಂದಿದೆ ಎಂದು ಆರೋಪಿಸಿದರು.
ಆಂಧ್ರಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿಯಾದ ನಿಯಮಾವಳಿ ಮತ್ತು ಜಟಿಲ ಕಾನೂನು ಪ್ರಕ್ರಿಯೆಗಳಿವೆ. ಇದರಿಂದಾಗಿ ಹೂಡಿಕೆದಾರರು ಕರ್ನಾಟಕದಿಂದ ಹಿಂದೆ ಸರಿಯುತ್ತಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಪೌತಿ ಖಾತೆ ವರ್ಗಾವಣೆ ಪ್ರಕ್ರಿಯೆ ತೀವ್ರವಾಗಿ ವಿಳಂಬವಾಗುತ್ತಿದೆ. ಎಂಇಆರ್-19 ಅಡಿಯಲ್ಲಿ ಲೈಸೆನ್ಸ್ ನೀಡುವ ವಿಷಯದಲ್ಲಿ ಸ್ಪಷ್ಟ ಮಾರ್ಗಸೂಚಿಗಳ ಕೊರತೆ ಇದೆ. ಪಾರ್ಕ್, ಸಿಎ ಹಾಗೂ ರಸ್ತೆಗಳಿಗೆ ಸಂಬಂಧಿಸಿದ ಡೀಡ್ ನೀಡುವ ಪ್ರಕ್ರಿಯೆಯಲ್ಲಿನ ವಿಳಂಬವು ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
2 ಸಾವಿರಕ್ಕೆ ಮರುಳಾಗಬೇಡಿ, 5 ವರ್ಷ ಒಂದು ಅವಕಾಶ ಕೊಡಿ: ಗೃಹಲಕ್ಷ್ಮಿಯರಿಗೆ ಎಚ್.ಡಿ. ಕುಮಾರಸ್ವಾಮಿ ಮನವಿ
ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು. ಇ-ಖಾತಾ ಸಾಫ್ಟ್‌ವೇರ್ ಅನ್ನು ತುರ್ತು ಪರಿಷ್ಕರಣೆ ಮಾಡಿ ಸರಿ ಹೋಗುವವರೆಗೂ ಹಿಂದಿನ ವ್ಯವಸ್ಥೆಯನ್ನು ಮುಂದುವರೆಸಬೇಕು ಎಂದು ಲ್ಯಾಂಡ್ ಡೆವಲಪರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಸ್ಪೂರ್ತಿ ಚಿದಾನಂದ್ ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ರಾಯರು ಡೆವಲಪರ್ಸ್‌ನ ಸನತ್ ಹಾಗೂ ಇತರರು ಉಪಸ್ಥಿತರಿದ್ದರು.