ತುಮಕೂರು: ಅಕ್ರಮ ಗೋ ಸಾಗಾಣಿಕೆಯನ್ನು (illegal cattle transport) ನಿಯಂತ್ರಿಸುವಂತೆ ಆಗ್ರಹಿಸಿ ಮಾರ್ಚ್ 24 ಮಂಗಳವಾರದಂದು ತಿಪಟೂರು ಬಂದ್‌ಗೆ ಬಿಜೆಪಿ, ಹಿಂದೂ ಪರ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ತಿಪಟೂರಿಗೆ ಆಗಮಿಸುತ್ತಿದ್ದ ಹಿಂದೂ ಪರ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ ತುಮಕೂರು ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಜಿಲ್ಲೆಯ ಗಡಿಭಾಗದಲ್ಲಿ ಪುನೀತ್ ಕೆರೆಹಳ್ಳಿಯನ್ನು ತಡೆದು ಎರಡು ದಿನ ತುಮಕೂರು ಜಿಲ್ಲೆಗೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿ ಬೆಂಗಳೂರಿಗೆ ವಾಪಸ್ ಕಳುಹಿಸಲಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತದ ಕಾರ್ಯವೈಖರಿಯ ಬಗ್ಗೆ ಪುನೀತ್ ಕೆರೆಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳದಲ್ಲೂ ವಿಧಿಸಲಾಗಿತ್ತು ನಿರ್ಬಂಧ
ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಮಾರ್ಚ್ 21ರಿಂದ 23ರವರೆಗೆ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದ ಪುನೀತ್ ಕೆರೆಹಳ್ಳಿ, ಪೊಲೀಸ್ ಬಂದೋಬಸ್ತ್‌ನಲ್ಲಿ ಹನುಮನ ದರ್ಶನ ಪಡೆದಿದ್ದರು.
ಕನಕಗಿರಿಯಲ್ಲಿ ಈ ಹಿಂದೆ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರಹಳ್ಳಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ಮತೀಯ ಭಾವನೆಗಳಿಗೆ ಪ್ರಚೋದನೆ ಉಂಟು ಮಾಡುವ ವಿವಾದಾತ್ಮಕ ಭಾಷಣ ಮಾಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ಹೀಗಾಗಿ ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ನಿಗದಿಯಾಗಿದ್ದ ಶಿವಾಜಿ ಜಯಂತೋತ್ಸವದಲ್ಲಿ ಭಾಗವಹಿಸಲು ಮುತಾಲಿಕ್ ಹಾಗೂ ಕೆರೆಹಳ್ಳಿ ತೆರಳುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಆದೇಶ ಹೊರಡಿಸಿದ್ದರು.