ತಿಪಟೂರು, ಆ. 19: ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಿಧನರಾದ ಹಿರಿಯ ರಾಜಕಾರಣಿ, ಬಿಜೆಪಿ ನಾಯಕ, ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಹಾಗೂ ತಿಪಟೂರು ಕ್ಷೇತ್ರದ ಮಾಜಿ ಶಾಸಕ ಬಿ.ಸಿ. ನಾಗೇಶ್ (BC Nagesh) ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವರ ತಿಪಟೂರು ನಿವಾಸದಲ್ಲಿ ವ್ಯವಸ್ಥೆ ಮಾಡಲಾಯಿತು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಅನೇಕ ರಾಜಕೀಯ ಮುಖಂಡರು, ಸಾರ್ವಜನಿಕರು ಹಾಗೂ ನಾಗೇಶ್ ಅವರ ಅಭಿಮಾನಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ʼʼಬಿ.ಸಿ. ನಾಗೇಶ್ ಸರಳ ಸಜ್ಜನಿಕೆಯ ಓರ್ವ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಸಚಿವರಾಗಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಾಕಷ್ಟು ನೋವು ಅನುಭವಿಸಿದರು. ವಿಧಿಯಾಟಕ್ಕೆ ಕೊನೆಗೆ ಅವರು ನಮ್ಮನ್ನು ಅಗಲಿದರು. ಅವರ ಅಗಲಿಕೆ ತುಂಬಾ ನೋವುಂಟು ಮಾಡಿದೆʼʼ ಎಂದು ಹೇಳಿದರು.
ಬಿ.ಸಿ. ನಾಗೇಶ್ ಅವರ ಅಂತಿಮ ದರ್ಶನ ಪಡೆದು ಮಾತನಾಡಿದ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಎಂ. ನಾಗರಾಜ, ʼʼನಾನು ಮತ್ತು ನಾಗೇಶ್ ವಿದ್ಯಾರ್ಥಿ ಪರಿಷತ್‌ನಲ್ಲಿದ್ದಾಗ ಸಹಪಾಠಿಗಳಾಗಿದ್ದೆವು. ಅಂದಿನ ಕಾಲದಿಂದಲೂ ಅಪ್ರತಿಮ ಹೋರಾಟಗಾರರಾಗಿದ್ದರು. ಅವರ ಅಗಲಿಕೆಯು ತುಂಬಾ ನೋವುಂಟು ಮಾಡಿದೆʼʼ ಎಂದರು.
ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ
ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಕೂಡ ಬಿ.ಸಿ. ನಾಗೇಶ್ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಮಾತನಾಡಿ, ʼʼಬಿ.ಸಿ. ನಾಗೇಶ್ ಅವರ ಅಗಲಿಕೆ ಎಲ್ಲರಿಗೂ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ನಾಗೇಶ್ ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ಕೊಡಲಿʼʼ ಎಂದು ತಿಳಿಸಿದರು.