ತುಮಕೂರು: ನಗರದ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಶಿಕ್ಷಣತಜ್ಞರಾದ ಕೆ.ಬಿ. ಜಯಣ್ಣ (K.B. Jayanna) ಅವರು ಭಾನುವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಪತ್ನಿ ಪೂರ್ಣಿಮಾ, ಮಗಳು ಪ್ರಿಯಾ, ಅಳಿಯ, ವಿದ್ಯಾವಾಹಿನಿ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ಕುಮಾರ್, ಇಬ್ಬರು ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕ್ಯಾತ್ಸಂದ್ರದ ಪಟೇಲ್ ಕುಟುಂಬದವರಾದ ಕೆ.ಬಿ. ಜಯಣ್ಣನವರು 46 ವರ್ಷಗಳ ಹಿಂದೆ ನಗರದಲ್ಲಿ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿದ್ದರು. ವಿವಿಧ ಸಮಾಜಸೇವಾ ಸಂಸ್ಥೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು. ಬೆಳಿಗ್ಗೆ ಅವರ ನಿವಾಸದಲ್ಲಿ ಪಾರ್ಥಿವಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಸಾವಿರಾರು ಜನ ಬಂದು ಅಂತಿಮ ನಮನ ಸಲ್ಲಿಸಿದರು. ನಗರ ಸಮೀಪದ ಬಸದಿಬೆಟ್ಟದ ತಪ್ಪಲಿನ ಅವರ ಜಮೀನಿನಲ್ಲಿ ಸಂಜೆ ಅಂತ್ಯ ಸಂಸ್ಕಾರ ನೆರವೇರಿತು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಕೆ.ಬಿ. ಜಯಣ್ಣನವರ ಅಂತಿಮ ದರ್ಶನ ಪಡೆದು ಆತ್ಮಕ್ಕೆ ಶಾಂತಿ ಕೋರಿದರು.
ಶಾಸಕರಾದ ಕೆ.ಎನ್. ರಾಜಣ್ಣ, ಜಿ.ಬಿ. ಜ್ಯೋತಿಗಣೇಶ್, ಎಸ್.ಆರ್. ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ, ಚಿದಾನಂದಗೌಡ, ಮಾಜಿ ಸಂಸದ ಜಿ.ಎಸ್. ಬಸವರಾಜು, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಡಾ. ರಫೀಕ್ ಅಹ್ಮದ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ಟಿಎಂಸಿಸಿ ಅಧ್ಯಕ್ಷ ಡಾ.ಎನ್.ಎಸ್. ಜಯಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಬಾಪೂಜಿ ವಿದ್ಯಾಂಸ್ಥೆಯ ಎನ್. ಬಸವಯ್ಯ, ಆಡಿಟರ್ ಟಿ.ಆರ್. ಆಂಜನಪ್ಪ, ಬಿಜೆಪಿ ಮುಖಂಡರಾದ ವೈ.ಹೆಚ್. ಹುಚ್ಚಯ್ಯ, ಎಸ್.ಪಿ. ಚಿದಾನಂದ್, ಬ್ಯಾಟರಂಗೇಗೌಡ, ಅರಕೆರೆ ರವೀಶ್, ಡಾ.ಎಸ್. ನಾಗಣ್ಣ, ಸಹ ಸಂಪಾದಕ ಟಿ.ಎನ್. ಮಧುಕರ್, ಹಿರಿಯ ಕ್ರೀಡಾಪಟು ಟಿ.ಕೆ. ಆನಂದ್, ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಹಾಲನೂನು ಲೇಪಾಕ್ಷ್, ಜೆಡಿಎಸ್ ಮುಖಂಡರಾದ ಶ್ರೀನಿವಾಸಪ್ರಸಾದ್, ಟಿ.ಆರ್. ನಾಗರಾಜ್, ಕಾಂಗ್ರೆಸ್ ಮುಖಂಡ ಕೆ. ನಯಾಜ್ ಅಹ್ಮದ್, ವಕೀಲರ ಸಂಘದ ಅಧ್ಯಕ್ಷ ಕೆಂಪರಾಜಯ್ಯ, ಜ್ಞಾನಬುತ್ತಿ ಸಂಸ್ಥೆಯ ಮುರಳಿಕೃಷ್ಣಪ್ಪ, ಬಸವರಾಜ ಹಿರೇಮಠ್, ವೀರಶೈವ ಸಮಾಜ ಸೇವಾ ಸಮಿತಿ ಮುಖಂಡರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಆಗಮಿಸಿ ಪಾರ್ಥಿಶರೀರದ ದರ್ಶನ ಮಾಡಿ ಕೆ.ಬಿ. ಜಯಣ್ಣ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಕೇಂದ್ರ ಸಚಿವ ವಿ. ಸೋಮಣ್ಣ ಸಂತಾಪ:
ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕೆ.ಬಿ. ಜಯಣ್ಣನವರು ಅಸಂಖ್ಯಾತ ವಿದ್ಯಾರ್ಥಿಗಳ ಬದುಕಿಗೆ ಜ್ಞಾನದ ಬೆಳಕಾಗಿದ್ದ ಶಿಕ್ಷಣ ಭೀಷ್ಮ. ಇವರ ಅಗಲಿಕೆಯಿಂದ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಯಣ್ಣನವರ ಮಾರ್ಗದರ್ಶನ, ಆದರ್ಶ ಹಾಗೂ ಶಿಕ್ಷಣದ ಬಗ್ಗೆ ಅವರಿಗಿದ್ದ ಕಾಳಜಿಯು ಸದಾ ನಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ. ತುಮಕೂರು ನಗರದಲ್ಲಿ ವಿದ್ಯಾವಾಹಿನಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ತನ್ಮೂಲಕ ವಿದ್ಯಾವಾಹಿನಿ ಮತ್ತು ವಿದ್ಯಾನಿಧಿ ಪದವಿ ಪೂರ್ವ ಕಾಲೇಜುಗಳ ಮುಖಾಂತರ ಸಲ್ಲಿಸಿರುವ ಸೇವೆ ಶ್ಲಾಘನೀಯವಾದದ್ದು. ನಾನಾ ಬಗೆಯ ಶಿಕ್ಷಣ ಶಾಖೆಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಮಹದುಪಕಾರವೆಸಗಿದ್ದಾರೆ ಎಂದು ಹೇಳಿ, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.