ಚಿಕ್ಕನಾಯಕನಹಳ್ಳಿ: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ (chikkanayakanahalli) ತಾಲೂಕಿನ ಗೋಡೆಕೆರೆ ಗೇಟ್ ಬಳಿ ಶುಕ್ರವಾರ ರಾತ್ರಿ ಸುಮಾರು 8 ಗಂಟೆ ವೇಳೆಯಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Car Accident) ನಾಲ್ವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಕೆ.ಬಿ. ಕ್ರಾಸ್ ಕಡೆಯಿಂದ ಚಿಕ್ಕನಾಯಕನಹಳ್ಳಿ ಕಡೆಗೆ ಬರುತ್ತಿದ್ದ ಕಾರಿನಲ್ಲಿ ಪಟ್ಟಣದ ನಿವಾಸಿಗಳಾದ ಅನಿಲ್ (31) ಹಾಗೂ ವಿವೇಕ್ (32) ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಅನಿಲ್ ಹಾಗೂ ವಿವೇಕ್ ಮೃತಪಟ್ಟಿದ್ದಾರೆ. ಇದೇ ಕಾರಿನಲ್ಲಿದ್ದ ನಿಶಾನಿ ಅನಿಲ್ (31) ಅವರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳುಹಿಸಲಾಗಿದೆ.
ಮತ್ತೊಂದು ಕಾರು ಚಿಕ್ಕನಾಯಕನಹಳ್ಳಿಯ ತಾತಯ್ಯನವರ ದರ್ಗಾಕ್ಕೆ ಭೇಟಿ ನೀಡಿ ತುರುವೇಕೆರೆ ಕಡೆಗೆ ತೆರಳುತ್ತಿತ್ತು. ಈ ಕಾರಿನಲ್ಲಿ 3 ವರ್ಷದ ಹೆಣ್ಣು ಮಗು ಅನಾಫಾತಿಮ ಹಾಗೂ ಚಾಲಕ ದಾವೂದ್ (45) ಸೇರಿದಂತೆ ಪ್ರಯಾಣಿಕರು ಇದ್ದರು. ಅಪಘಾತದಲ್ಲಿ ಅನಾಫಾತಿಮ ಹಾಗೂ ಚಾಲಕ ದಾವೂದ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಾಕು ನಾಯಿಯೊಂದಿಗೆ ಜಗಳವಾಡಿದ ಬೀದಿ ನಾಯಿಯನ್ನು ಕೊಂದೇ ಬಿಟ್ಟ ಪಾಪಿ; ಶಿವಮೊಗ್ಗದಲ್ಲೊಂದು ಹೃದಯ ವಿದ್ರಾವಕ ಘಟನೆ
ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ನಾಲ್ವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೆ ನಿಖರ ಕಾರಣ ತಿಳಿದುಬರಬೇಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.