ಚಿಕ್ಕನಾಯಕನಹಳ್ಳಿ: ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಭಾನುವಾರ ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಹಾಗೂ ಅಪೋಲೋ ಫೌಂಡೇಶನ್ ಸಹಯೋಗದಲ್ಲಿ ಉಚಿತ ವಿಶೇಷ ಆರೋಗ್ಯ ಶಿಬಿರವನ್ನು (Free health camp) ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ನಿಟ್ಟಿನಲ್ಲಿ ಆಯೋಜನೆಯಾಗಿದ್ದ ಈ ಶಿಬಿರದಲ್ಲಿ ಸಾಮಾನ್ಯ ಔಷಧ ಹಾಗೂ ಸ್ತ್ರೀರೋಗ ಶಾಸ್ತ್ರ ತಜ್ಞರು ಪಾಲ್ಗೊಂಡು ಅನೇಕ ಜನರಿಗೆ ಉಚಿತ ತಪಾಸಣೆ ನಡೆಸಿದರು.
ಬೆಳಗ್ಗೆಯಿಂದಲೇ ಆಗಮಿಸಿದ್ದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಗಳನ್ನು ವಿತರಿಸಿದರು. ವಿಶೇಷವಾಗಿ ಮಹಿಳೆಯರಿಗೆ ಸ್ತ್ರೀರೋಗ ತಜ್ಞರಿಂದ ಪ್ರತ್ಯೇಕ ಆಪ್ತಸಮಾಲೋಚನೆ ಹಾಗೂ ತಪಾಸಣಾ ಸೌಲಭ್ಯ ಕಲ್ಪಿಸಲಾಗಿತ್ತು.
Health Tips: ಕೇಸರಿ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ ಗೊತ್ತಾ?
ಈ ವೇಳೆ ಮಾತನಾಡಿದ ಬಿಎಸ್‌ಎಸ್ ಮೈಕ್ರೋ ಫೈನಾನ್ಸ್‌ನ ಪದಾಧಿಕಾರಿಗಳು, "ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯರ ಚಿಕಿತ್ಸೆ ಸುಲಭವಾಗಿ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಇಂತಹ ಆರೋಗ್ಯ ಜಾಗೃತಿ ಶಿಬಿರಗಳನ್ನು ಮುಂದೆಯೂ ಆಯೋಜಿಸಲಾಗುವುದು" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುದ್ದೇನಹಳ್ಳಿ ಗ್ರಾಮದ ಪ್ರಮುಖರು, ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಹಾಗೂ ಅಪೋಲೋ ಫೌಂಡೇಶನ್‌ನ ವೈದ್ಯಕೀಯ ತಂಡದವರು ಉಪಸ್ಥಿತರಿದ್ದರು.