ತುಮಕೂರು, ಆ.10: ಕನಿಷ್ಠ ವೇತನ ಪರಿಷ್ಕರಣೆ ಕುರಿತು ಹೊರಡಿಸಿರುವ ಆದೇಶವನ್ನು ಕೂಡಲೇ ದೃಢೀಕರಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕು ಹಾಗೂ ಪರಿಷ್ಕೃತ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸರ್ಕಾರದ ಹೊರಗುತ್ತಿಗೆ ನೌಕರರು ಸೋಮವಾರ ನಗರದ (Tumkur) ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಮುಖ ಬೇಡಿಕೆಗಳು
ಅಂತಿಮ ಅಧಿಸೂಚನೆಗೆ ಒತ್ತಾಯ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 4.5 ಲಕ್ಷ ಹೊರಗುತ್ತಿಗೆ ನೌಕರರು ಸಂಕಷ್ಟದಲ್ಲಿದ್ದು, ಕಾರ್ಮಿಕ ಇಲಾಖೆಯಿಂದ ಹೊರಡಿಸಲಾಗಿರುವ ಕನಿಷ್ಠ ವೇತನ ಪರಿಷ್ಕರಣೆ ಆದೇಶದ ಅಧಿಸೂಚನೆಯನ್ನು ಇನ್ನಷ್ಟು ವಿಳಂಬ ಮಾಡದೆ ತಕ್ಷಣವೇ ಅಂತಿಮಗೊಳಿಸಬೇಕು.
ಸರ್ಕಾರದ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಇತರೆ ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಲ್ಲ ನೌಕರರಿಗೂ ಇದು ಕಡ್ಡಾಯವಾಗಿ ಅನ್ವಯವಾಗುವಂತೆ ಸ್ಪಷ್ಟ ಆದೇಶ ಹೊರಡಿಸಬೇಕು. ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಪಾವತಿಸುವ ಗುತ್ತಿಗೆದಾರರು ಹಾಗೂ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೆ ತರಬೇಕು.
ಪರಿಷ್ಕೃತ ವೇತನ ಜಾರಿಗೆ ಬಂದ ನಂತರ ಬಾಕಿ ಉಳಿದಿರುವ ವೇತನ ವ್ಯತ್ಯಾಸವನ್ನು ಅರ್ಹ ನೌಕರರಿಗೆ ಪಾವತಿಸುವುದರ ಜತೆಗೆ ಕಾನೂನುಬದ್ಧವಾಗಿ ಅನ್ವಯವಾಗುವ ಇತರ ಸೌಲಭ್ಯಗಳು ಮತ್ತು ಭತ್ಯೆಗಳನ್ನು ಸಮರ್ಪಕವಾಗಿ ನೀಡಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.
ರಾಜ್ಯ ಪ್ರಧಾನ ಕಾರ್ಯದರ್ಶಿ ಡಮರುಗೇಶ್ ಮಾತನಾಡಿ, ನೌಕರರ ಶ್ರಮಕ್ಕೆ ನ್ಯಾಯಯುತ ಪ್ರತಿಫಲ ದೊರೆಯುವುದು ಸಾಮಾಜಿಕ ನ್ಯಾಯದ ಪ್ರಮುಖ ಅಂಶವಾಗಿದ್ದು, ನೌಕರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಈ ಮನವಿಯನ್ನು ತುರ್ತಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬರ, ಬೆಳೆ ಹಾನಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಸಚಿವ ಪ್ರಿಯಾಂಕ್ ಖರ್ಗೆ
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹರ್ಷ, ಕಾರ್ಯಾಧ್ಯಕ್ಷ ನಂಜರೆಡ್ಡಿ, ರಾಜ್ಯ ಸಮಿತಿ ಸದಸ್ಯರಾದ ಮಹೇಶ್ವರ್, ಹರೀಶ್, ಭವ್ಯಶ್ರೀ ಸೇರಿದಂತೆ ಮುಂತಾದವರು ನೇತೃತ್ವ ವಹಿಸಿದ್ದರು.