ಪಾವಗಡ: ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಲ್ಲೂ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಹೃದಯಾಘಾತಕ್ಕೆ ಬಲಿಯಾದ ಬೆನ್ನಲ್ಲೇ ಅಂತಹುದೇ ಮತ್ತೊಂದು ಘಟನೆ (Heart Attack) ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಕಾಲೇಜು ಮುಗಿಸಿ ಹೋಗುತ್ತಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಪಾವಗಡದಲ್ಲಿ ಶನಿವಾರ ನಡೆದಿದೆ.
ಮೈಥಿಲಿ ಮೃತ ವಿದ್ಯಾರ್ಥಿನಿ. ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ.ಈ.ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಮೈಥಿಲಿ, ಶನಿವಾರ ತರಗತಿ ಮುಗಿಸಿ ಪಟ್ಟಣದ ಬಸ್ ನಿಲ್ದಾಣದ ಕಡೆ ಬರುವಾಗ ಚಳ್ಳಕೆರೆ ಕ್ರಾಸ್ ಬಳಿ ಸುಸ್ತಾಗಿ ಕೆಳಗೆ ಬಿದ್ದಿದ್ದಾಳೆ. ಆಕೆಯನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ, ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ.
ಸಾರ್ವಜನಿಕ ಆಸ್ಪತ್ರೆಯ ಬಳಿ ವಿದ್ಯಾರ್ಥಿನಿಯ ಸ್ನೇಹಿತರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಂತರ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Road Rage: ರೋಡ್ ರೇಜ್ ನಡೆಸಿದ ಇಬ್ಬರು ದುಷ್ಕರ್ಮಿಗಳ ಬಂಧನ
ಸಾಲ ವಾಪಸ್ ಕೊಡದ್ದಕ್ಕೆ 17 ವರ್ಷದ ಬಾಲಕಿಯನ್ನು ಅಪಹರಿಸಿ ಮದುವೆಯಾದ ಭೂಪ!

ಬೆಳಗಾವಿ: ಕೇವಲ 50 ಸಾವಿರ ರೂ. ಸಾಲ ವಾಪಸ್ ಕೊಡದಿದ್ದಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಒತ್ತಾಯಪೂರ್ವಕವಾಗಿ ಮದುವೆಯಾಗಿರುವ ಘಟನೆ (Child Marriage) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ವಿಶಾಲ್ ಡವಳಿ, ಬಾಲಕಿಯನ್ನು ಮದುವೆಯಾದ ಆರೋಪಿಯಾಗಿದ್ದಾನೆ. ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ 17 ವರ್ಷದ ಬಾಲಕಿ ಬೆಳಗಾವಿಯ ಅನಗೋಳದಲ್ಲಿ ವಾಸವಿದ್ದಳು. ಆಕೆಯ ತಂದೆ ತೀರಿಕೊಂಡಿದ್ದು, ತಾಯಿ ವಾಚ್‌ಮನ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕುಟುಂಬದ ಆಸ್ಪತ್ರೆ ಖರ್ಚಿಗಾಗಿ ಬಾಲಕಿ ತಾಯಿ, ಪಕ್ಕಿರವ್ವ ನಗರದ ವಡಗಾಂವಿಯ ರೇಖಾ ಡವಳಿ ಎಂಬುವವರ ಬಳಿ 50 ಸಾವಿರ ರೂ. ಸಾಲ ಪಡೆದುಕೊಂಡಿದ್ದರು.
ಪಡೆದುಕೊಂಡ ಸಾಲಕ್ಕೆ ಬಾಲಕಿ ತನ್ನ ಕಿವಿ ಓಲೆಯನ್ನು ಸಾಲಗಾರರಿಗೆ ಕೊಟ್ಟು ಸ್ವಲ್ಪ ಸಮಯದ ನಂತರ ಸಾಲ ತೀರಿಸುವುದಾಗಿ ಹೇಳಿದ್ದಳು. ಹಣ ವಾಪಸ್ ಕೊಡಲು ತಡವಾಗಿದ್ದಕ್ಕೆ ಕೋಪಗೊಂಡ ಆರೋಪಿ ರೇಖಾ ಡವಳಿ, ಬಾಲಕಿಗೆ ಹಣ ಕೊಡುವಂತೆ ಕಿರುಕುಳ ನೀಡಿದ್ದಾಳೆ. ಅಷ್ಟೇ ಅಲ್ಲದೆ ಹಣ ಕೊಡಲು ಸಾಧ್ಯವಾಗದಿದ್ದರೆ ತನ್ನ ಮಗ ವಿಶಾಲ್ ಜತೆ ಬಾಲಕಿಯನ್ನು ಮದುವೆ ಮಾಡಿ ಕೊಡುವಂತೆ ಒತ್ತಾಯ ಮಾಡಿದ್ದಳು.
ಇಷ್ಟಕ್ಕೆ ಸುಮ್ಮನಾಗದ ಆರೋಪಿ ರೇಖಾ ಪತಿ ಪುಂಡಲೀಕ ಹಾಗೂ ತನ್ನ ಇಬ್ಬರು ಮಕ್ಕಳಾದ ವಿಶಾಲ್ ಹಾಗೂ ಶ್ಯಾಮ್ ಜತೆಗೂಡಿ ಅಪ್ರಾಪ್ತೆಯನ್ನು ಕಳೆದ ನವೆಂಬರ್ 17 ರಂದು ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಮಗಳನ್ನು ಬಿಡುವಂತೆ ತಾಯಿ ಅಂಗಲಾಚಿದರೂ ಬಿಡದ ಆರೋಪಿತರು ಅಥಣಿಗೆ ಕರೆದೊಯ್ದು, ದೇವಸ್ಥಾನವೊಂದರಲ್ಲಿ ವಿಶಾಲ್ ಜತೆ ಬಾಲಕಿಯ ಮದುವೆ ಮಾಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | ಅಂಗಡಿಯಿಂದ ಹೆಡ್‌ಫೋನ್ ಖರೀದಿಸಿ ತೆರಳಿದ ಶಂಕಿತ ; ಸೈಫ್ ಮನೆಗೆ ನುಗ್ಗಿದ್ದ ಆರೋಪಿಯ ಮತ್ತೊಂದು ಸಿಸಿಟಿವಿ ದೃಶ್ಯ ವೈರಲ್
ಇನ್ನು ಮದುವೆ ಬಳಿಕ ಯುವಕನ ಕುಟುಂಬದವರು ಕಿರುಕುಳ ನೀಡಿರುವುದಾಗಿ ಬಾಲಕಿ ಕಡೆಯವರು ದೂರು ನೀಡಿದ್ದಾರೆ. ಈ ಸಂಬಂಧ ನಗರದ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.