ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೇವರಾಯನದುರ್ಗದಲ್ಲಿ ಕಾಡು ಮನುಷ್ಯರು ಕಾಣಿಸಿಕೊಂಡದ್ದು ನಿಜವೇ?; ವೈರಲ್ ವಿಡಿಯೊ ಬಗ್ಗೆ ಪೊಲೀಸರು ಹೇಳಿದ್ದೇನು?

​Tumkur News: ತುಮಕೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದೇವರಾಯನದುರ್ಗದಲ್ಲಿ ಇಬ್ಬರು ಕಾಡು ಮನುಷ್ಯರು ಕಾಣಿಸಿಕೊಂಡಿದ್ದಾರೆ ಎಂದು ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಬಗ್ಗೆ ತುಮಕೂರು ಜಿಲ್ಲಾ ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

​ತುಮಕೂರು: ಪ್ರಸಿದ್ಧ ಪ್ರವಾಸಿ ಹಾಗೂ ಐತಿಹಾಸಿಕ ತಾಣವಾದ ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ (Devarayanadurga hill) ಇಬ್ಬರು ಕಾಡು ಮನುಷ್ಯರು ಕಾಣಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೊ ಸಂಪೂರ್ಣ ಸುಳ್ಳು ಎಂದು ಜಿಲ್ಲಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

​ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದು ವೈರಲ್ ಆಗಿತ್ತು. ಅದರಲ್ಲಿ, "ದೇವರಾಯನದುರ್ಗದಲ್ಲಿ ಇದ್ದಕ್ಕಿದ್ದಂತೆ ಇಬ್ಬರು ಕಾಡು ಜನರು ಕಾಣಿಸಿಕೊಂಡಿದ್ದರು. ನಾವು ಅವರಿಗೆ ಯಾವುದೇ ತೊಂದರೆ ಕೊಡದೇ ಅವರು ಮುಂದೆ ಹೋಗುವವರೆಗೂ ಸುಮ್ಮನಿದ್ದೆವು" ಎಂದು ಬರೆದುಕೊಂಡು ಪೋಸ್ಟ್ ಮಾಡಿಕೊಳ್ಳಲಾಗಿತ್ತು. ಇದು ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಆತಂಕಕ್ಕೂ ಕಾರಣವಾಗಿತ್ತು.

​ಪೊಲೀಸರಿಂದ ಫ್ಯಾಕ್ಟ್ ಚೆಕ್:

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸರು, ತಕ್ಷಣವೇ ತನಿಖೆ ಕೈಗೊಂಡು, ವಿಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದಾರೆ. ತನಿಖೆಯ ಬಳಿಕ ಇದು ಸಂಪೂರ್ಣವಾಗಿ ಸುಳ್ಳು ಸುದ್ದಿ ಹಾಗೂ ನಕಲಿ ವಿಡಿಯೊ ಎಂಬುದು ಅಧಿಕೃತವಾಗಿ ತಿಳಿದುಬಂದಿದೆ.

ಸುಳ್ಳು ಸುದ್ದಿ ಹಬ್ಬಿಸಿದ್ರೆ ಕಠಿಣ ಕ್ರಮದ ಎಚ್ಚರಿಕೆ:

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ದೇವರಾಯನದುರ್ಗದಲ್ಲಿ ಅಂತಹ ಯಾವುದೇ ಘಟನೆ ನಡೆದೇ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಇಂತಹ ಆಧಾರರಹಿತ ಹಾಗೂ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಿದ್ದಾರೆ. ಈ ರೀತಿಯ ಸುಳ್ಳು ಸುದ್ದಿಗಳನ್ನು ಅಥವಾ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಿ ಹಬ್ಬಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರು ಎಚ್ಚರಿಕೆ ನೀಡಿದ್ದಾರೆ.