ತುಮಕೂರು: ಸಹ ಶಿಕ್ಷಣ ಕೊಡುತ್ತಿರುವ ಶಿಕ್ಷಣ ಸಂಸ್ಥೆಯಾದ ಸಿದ್ಧಾರ್ಥ ಸಂಸ್ಥೆಯಲ್ಲಿ ಶೇ.60ರಷ್ಟು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ ಎಂದು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ತಿಳಿಸಿದರು. ನಗರದ ಅಗಳಕೋಟೆಯ ಶಿಕ್ಷಣ ಭೀಷ್ಮ ಡಾ.ಎಚ್.ಎಮ್.ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಸಾಹೇ) ಸಂಸ್ಥೆಯ 14ನೇ ಘಟಿಕೋತ್ಸವದಲ್ಲಿ ಮಾತನಾಡಿ, ಮಹಿಳಾ ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳಲ್ಲಿ ಕೇವಲ ಹೆಣ್ಣು ಮಕ್ಕಳೇ ಶಿಕ್ಷಣ ಪಡೆಯುವುದು ಹೆಚ್ಚುಗಾರಿಕೆಯಲ್ಲ. ಸಹ ಶಿಕ್ಷಣ ನೀಡುತ್ತಿರುವ ಸಂಸ್ಥೆಯಲ್ಲಿ ಮೂರನೇ ಎರಡು ಭಾಗದಷ್ಟು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿರುವುದು ಶ್ಲಾಘನೀಯ ಎಂದರು.
ಅಸಮಾನತೆ ಎಂಬುದು ನಮ್ಮ ದೇಶದ ಅಭಿವೃದ್ಧಿಗೆ ಬೀಳುತ್ತಿರುವ ದೊಡ್ಡ ಪೆಟ್ಟು. ಶಿಕ್ಷಣ, ಅರೋಗ್ಯ, ಆರ್ಥಿಕ, ಆದಾಯಗಳಂತಹ ಕ್ಷೇತ್ರದಲ್ಲಿ ಪ್ರಮುಖವಾಗಿ ಅಸಮಾನತೆ ಹೆಚ್ಚಾಗಿದೆ. ಭಾರತದಲ್ಲಿ ಬಡತನ ಕಡಿಮೆಯಾಗಿದೆ ಆದರೆ ಅಸಮಾನತೆ ಹೆಚ್ಚಾಗಿದೆ, ಆದ್ದರಿಂದ ಅಸಮಾನತೆಯ ಸಾಮಾಜಿಕ ವ್ಯವಸ್ಥೆ ಬದಲಾಗಬೇಕಿದೆ ಎಂದು ಪದವಿ ಪಡೆದ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಸುಸ್ಥಿರಾಭಿವೃದ್ಧಿ ಕಾಪಾಡುವುದು ಬಹಳ ಮುಖ್ಯವಾಗಿದೆ. ಅಂದರೆ "ಪ್ರಕೃತಿ ರಕ್ಷತಿ ರಕ್ಷಿತಃ" ಅರ್ಥ ಪ್ರಕೃತಿಯನ್ನು ಯಾರು ರಕ್ಷಿಸುತ್ತಾರೋ, ಅವರನ್ನು ಪ್ರಕೃತಿ ರಕ್ಷಿಸುತ್ತದೆ. ಜಪಾನ್, ಯುರೋಪ್ ದೇಶಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದ್ದು, ಚೀನಾ ಜನಸಂಖ್ಯೆ ಸುಸ್ಥಿರವಾಗಿದೆ. ಈಗಾಗಾಲೇ ಭಾರತ 1.5 ಬಿಲಿಯನ್ ಜನಸಂಖ್ಯೆ ಹೊಂದಿದ್ದು, 2050ರ ವೇಳೆಗೆ 300 ಮಿಲಿಯನ್‌ಗೆ ಏರಲಿದೆ. ಆದ ಕಾರಣ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಪರಿಸರವನ್ನು ಕಾಪಾಡುವುದು ಮತ್ತು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಘಟಿಕೋತ್ಸವದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಸ್ಥಾಪಕ ಶ್ರೀ ಸ್ವಾಮಿ ಜಪಾನಂದಜಿ ಮಹಾರಾಜ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಏರೋಸ್ಪೇಸ್ ಇಂಜಿನಿಯರಿಂಗ್‌ನ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಕೆ.ಪಿ.ಜೆ.ರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ, ಏರೋಸ್ಪೇಸ್ ಇಂಜಿನಿಯರಿಂಗ್‌ನ ವಿಶ್ರಾಂತ ಪ್ರಾಧ್ಯಾಪಕರಾದ ಕೆ. ಪಿ. ಜೆ ರೆಡ್ಡಿ , ಜಾಗತಿಕವಾಗಿ ಗುರುತಿಸಿಕೊಂಡಿರುವ ಸಾಹೇ ವಿಶ್ವವಿದ್ಯಾಲಯದಿಂದ ಗೌರವ ಲಭಿಸಿರುವುದು ಸಂತಸದ ವಿಷಯ. ಇದಕ್ಕೆ ಸಂಸ್ಥೆಗೆ ಅಭಾರಿಯಾಗಿದ್ದೇನೆ ಎಂದರು. ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಹೆಚ್ಚು ಪಾಲು ಹೆಣ್ಣು ಮಕ್ಕಳಿದ್ದಾರೆ. ಅಂತಹ ಹೆಣ್ಣು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವುದು ನಮ್ಮ ಮುಂದಿರುವ ಸವಾಲಾಗಿದೆ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಎ ಸೂಕ್ತ ಶಿಕ್ಷಣ ನೀಡುವ ನಿಟ್ಟಿನಲ್ಲಿ ನೂತನವಾಗಿ ಗ್ರಾಮೀಣ ಭಾಗದಲ್ಲೇ ವಿಶ್ವವಿದ್ಯಾಲಯ ತೆರೆಯುವ ಆಶಯವನ್ನು ಹೊಂದಿದ್ದೇವೆ, ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಲಿದೆ ಎಂದರು.
ಘಟಿಕೋತ್ಸವದಲ್ಲಿ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ್ , ಸಾಹೇ ವಿಶ್ವವಿದ್ಯಾಲಯದ ೧೪ನೇ ಘಟಿಕೋತ್ಸವದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳ ಒಟ್ಟು 1086 ಮಂದಿಗೆ ಪದವಿ ಪ್ರದಾನ ಮಾಡಿದರು.
14 ಮಂದಿಗೆ ಪಿಎಚ್.ಡಿ ಪದವಿ, ವೈದ್ಯಕೀಯದಲ್ಲಿ 03, ದಂತ ವೈದ್ಯಕೀಯದಲಿ 02, ಮತ್ತು ಎಂಜಿನಿಯರಿಂಗ್‌ನಲ್ಲಿ 8 ಮಂದಿ ಸೇರಿದಂತೆ ಒಟ್ಟು 15 ಮಂದಿಗೆ ಚಿನ್ನದ ಪದಕ ಮತ್ತು ಪದವಿಗಳನ್ನು ಪ್ರದಾನ ಮಾಡಿದರು. ಇದೇ ವೇಳೆ ಇಬ್ಬರಿಗೆ ಫೆಲೋಶಿಪ್ ನೀಡಿದ್ದು ಈ ಬಾರಿ ಘಟಿಕೋತ್ಸವದ ವಿಶೇಷವಾಗಿತ್ತು.
ಸಾಹೇ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಕೆ ಬಿ ಲಿಂಗೇಗೌಡ, ಸಾಹೇ ವಿಶ್ವವಿದ್ಯಾನಿಲಯ ಪ್ರಗತಿನೋಟದ ವರದಿಯನ್ನು ಮಂಡಿಸಿದರು.
ಇದನ್ನೂ ಓದಿ | Tumkur News: ಜ್ಞಾನ ವೃದ್ಧಿ, ವ್ಯಕ್ತಿತ್ವ ರೂಪಿಸಿಕೊಳ್ಳಲು ಓದುವ ಹವ್ಯಾಸ ಸಹಕಾರಿ: ಡಾ. ಶಿವಶಂಕರ ಕಾಡದೇವರಮಠ
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರಿ ಮತ್ತು ಡಾ.ಜಿ.ಎಸ್.ಆನಂದ್ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಸಾಹೇ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಅಶೋಕ್ ಮೆಹತಾ, ಪರೀಕ್ಷಾಂಗ ವಿಭಾಗದ ನಿಯಂತ್ರಕ ಡಾ.ಗುರುಶಂಕರ್ ಸಿ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಪ್ರಭಾಕರ್ ಜಿ ಎನ್, ಉಪ ಕುಲಸಚಿವ ಡಾ.ಸುದೀಪ್ ಕುಮಾರ್, ಟಿ.ಬೇಗೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ ದಿವಾಕರ್, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶ, ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಡೀನ್‌ಗಳು, ಶೈಕ್ಷಣಿಕ ಮಂಡಳಿಯ ಸಮಿತಿ ಸದ್ಯಸರು, ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.