ಮಧುಗಿರಿ, ನ.25: ತಾಲೂಕಿನಲ್ಲಿ 187 ಸಾಗುವಳಿ ಚೀಟಿಗಳನ್ನು ವಿತರಿಸದೆ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ, ತಕ್ಷಣ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡುವಂತೆ ಶಾಸಕ ಕೆ.ಎನ್. ರಾಜಣ್ಣ ತಹಸೀಲ್ದಾರ್ಗೆ ಸೂಚನೆ ನೀಡಿದರು. ಪಟ್ಟಣದ (Madhugiri News) ತಾಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರು ಹಲವು ವರ್ಷಗಳಿಂದ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ 187 ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ಅರ್ಜಿಗಳ ಪರಿಶೀಲನೆ ನಡೆಸಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಾಗುವಳಿ ಮಾಡುತ್ತಿರುವ ರೈತರು ತಮ್ಮ ಜಮೀನಿನ ಹಕ್ಕುಪತ್ರ ಪಡೆಯಲು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅರ್ಜಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ನಿಯಮಾನುಸಾರ ಅರ್ಹ ಫಲಾನುಭವಿಗಳನ್ನು ಗುರುತಿಸಿ ವಿಲೇವಾರಿ ಮಾಡಬೇಕು. ಅನಗತ್ಯ ವಿಳಂಬ ಮಾಡದೆ ಬಾಕಿ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಂದಾಯ ಹಾಗೂ ಗ್ರಾಮಲೆಕ್ಕಿಗ ಲಾಗಿನ್ನಲ್ಲಿರುವ ಸಾಗುವಳಿ ಚೀಟಿ ಪ್ರಕರಣಗಳು ಡಿ.10 ರೊಳಗಾಗಿ ಸರ್ವೆ ಇಲಾಖೆಯ ಲಾಗಿನ್ಗೆ ಕಳುಹಿಸಿ ಅಗತ್ಯ ಕ್ರಮ ತೆಗೆದು ಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನಲ್ಲಿ 2357 ಸಾಗುವಳಿ ಚೀಟಿ ಈ ಹಿಂದೆ ನೀಡಿದ್ದು, ಆ ದಾಖಲಾತಿಗಳು ಕಳೆದು ಹೋಗಿವೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದಾಗ, ಆ ರೈತರ ಬಳಿ ಇರುವ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ, ಅವರಿಂದ ಸೂಕ್ತ ದಾಖಲೆಗಳನ್ನು ಡಿ.20ರೊಳಗಾಗಿ ಪಡೆಯಬೇಕೆಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ಮಜರೆ ಗ್ರಾಮಗಳನ್ನು ಗುರುತಿಸಿರುವ ಕಡೆ ರುದ್ರಭೂಮಿಗಳಿಗೂ ಜಾಗವನ್ನು ಮೀಸಲಿಡಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದರು. ತಾಲೂಕಿನಲ್ಲಿ ಕೆಲವರು ಸರ್ಕಾರದ ಜಾಗಗಳನ್ನು ಸುಳ್ಳು ದಾಖಲೆಗಳನ್ನು ಸೃಷ್ಠಿಸಿಕೊಂಡು ಕಬಳಿಸಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಎಚ್ಚರ ವಹಿಸಬೇಕು. ಸರ್ಕಾರದ ಜಾಗಗಳನ್ನು ಉಳಿಸಿಕೊಂಡರೆ, ಸಾರ್ವಜನಿಕರ ಹಾಗೂ ಇಲಾಖೆಯ ಕಚೇರಿಗಳಿಗೆ ಉಪಯೋಗಕ್ಕೆ ಬರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಸಾರ್ವಜನಿಕ ಹಾಗೂ ರೈತರ ಆಹವಾಲು ಸ್ವೀಕರಿಸಿದರು.
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ: ಮಧುಗಿರಿ ಬಿಇಒ ಡಿ.ಎ. ನರಸಿಂಹಮೂರ್ತಿ
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ನಂದಿನಿ, ತಾ.ಪಂ.ಇಒ ಉತ್ತಮ್, ಬಗರ್ ಹುಕುಂ ಸಮಿತಿ ಸದಸ್ಯರಾದ ಎಂ.ಎಸ್. ಮಲ್ಲಿಕಾರ್ಜುನಯ್ಯ, ಸೊಸೈಟಿ ರಾಮಣ್ಣ, ಸಿಪಿಐ ಹನುಮಂತರಾಯಪ್ಪ, ಕಂದಾಯ ಇಲಾಖೆ, ಸರ್ವೇ ಇಲಾಖೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ರೈತರು ಇದ್ದರು.