ತುಮಕೂರು, ಸೆ.21: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಮೂಲ ಉದ್ದೇಶವನ್ನು ಪುನರುಜ್ಜೀವನಗೊಳಿಸಲು ಮತ್ತು ಪರಿಷತ್ತಿನ ಸ್ವಾಯತ್ತತೆ ಹಾಗೂ ಘನತೆಯನ್ನು ಕಾಪಾಡಲು ಹಿರಿಯ ಲೇಖಕ ಹಾಗೂ ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಬೆಂಬಲಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಕಸಾಪ ಅಧ್ಯಕ್ಷ ಸ್ಥಾನಕ್ಕೆ ರಾಜಕೀಯ ಪ್ರಭಾವಿ ಅಧಿಕಾರಿಗಳ ಅವಶ್ಯಕತೆಯಿಲ್ಲ. ಬದಲಿಗೆ ಸೇವಾ ಮನೋಭಾವ, ನೈತಿಕ ಶುದ್ಧತೆ ಮತ್ತು ಪಾರದರ್ಶಕತೆ ಹೊಂದಿರುವ ಜಾಣಗೆರೆ ವೆಂಕಟರಾಮಯ್ಯ ಅವರಂತಹ ಪ್ರಾಮಾಣಿಕ ವ್ಯಕ್ತಿಯ ಆಯ್ಕೆ ಅನಿವಾರ್ಯ ಎಂದು ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ಪರಿಷತ್ತಿನ ಮೂಲ ಉದ್ದೇಶಗಳು ವಿಫಲಗೊಂಡಿದ್ದು, ಮಾಜಿ ಅಧ್ಯಕ್ಷ ಮಹೇಶ್ ಜೋಶಿ ಅವರು ರಾಜಕೀಯ ಪಕ್ಷದ ಬೆಂಬಲದೊಂದಿಗೆ ಸರ್ವಾಧಿಕಾರಿ ಧೋರಣೆ ಅನುಸರಿಸಿ ಕಸಾಪ ಸ್ವಾತಂತ್ರ್ಯಕ್ಕೆ ಧೆಕ್ಕೆ ತಂದಿದ್ದರು ಎಂದು ಸಿದ್ಧರಾಮಯ್ಯ ಆರೋಪಿಸಿದರು.
ರಾಜಕೀಯ ಕಬಳಿಕೆಯಿಂದ ಪರಿಷತ್ತನ್ನು ಮುಕ್ತಗೊಳಿಸಲು ನಡೆದ ತೀವ್ರ ಹೋರಾಟದ ಫಲವಾಗಿ ಮಹೇಶ್ ಜೋಶಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತ್ತುಗೊಳಿಸಲಾಗಿದ್ದು, ಇದೀಗ ಸಮಾನ ಮನಸ್ಕರೆಲ್ಲರೂ ಸೇರಿ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ.
ಜಾಣಗೆರೆ ವೆಂಕಟರಾಮಯ್ಯ ಪ್ರಣಾಳಿಕೆ ಮತ್ತು ಭರವಸೆಗಳು
- ಕಸಾಪಗೆ ಶುದ್ಧೀಕರಣ ಹಾಗೂ ಹೊಸ ಘನತೆ ತರುವುದು.
- ನಿಂತು ಹೋಗಿರುವ 'ಕನ್ನಡ-ಕನ್ನಡ ನಿಘಂಟು' ಯೋಜನೆಗೆ ಮರುಚಾಲನೆ.
- ಮುಖವಾಣಿ 'ಕನ್ನಡ ನುಡಿ' ಪತ್ರಿಕೆ ಮರುಪ್ರಕಟಣೆ ಆರಂಭ.
- ಯುವ ಸಮೂಹಕ್ಕಾಗಿ ವಿಶೇಷ ಸಾಹಿತ್ಯ ಶಿಬಿರ, ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳ ಆಯೋಜನೆ.
- ಗ್ರಾಮೀಣ ಹಾಗೂ ನಗರ ಪ್ರದೇಶದ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಸರ್ಕಾರಕ್ಕೆ ನಿರಂತರ ಒತ್ತಡ.
ಬೆಂಬಲ ಮತ್ತು ದೇಣಿಗೆ: ಪರಿಷತ್ತಿನ ಚುನಾವಣೆ ಹಾಗೂ ಅಜೆಂಡಾ ಯಶಸ್ಗಾಗಿ ಮಂಡ್ಯದ ರಾಜಶೇಖರಯ್ಯ ಅವರು 5 ಸಾವಿರ ರೂ.ಗಳ ದೇಣಿಗೆ ನೀಡಿ ಶುಭ ಹಾರೈಸಿದ್ದಾರೆ.
ಪ್ರಗತಿ ಪಥದಲ್ಲಿ ತುಮಕೂರು ಪಟ್ಟಣ ಕ್ರೆಡಿಟ್ ಸೊಸೈಟಿ: ಪಿ.ಆರ್. ದೇವರಾಜು
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಾಹಿತಿಗಳಾದ ಪ್ರೊ. ಜಯಪ್ರಕಾಶಗೌಡ, ಡಾ. ಬಂಜಗೆರೆ ಜಯಪ್ರಕಾಶ, ಬಾ.ಹ. ರಮಾಕುಮಾರಿ, ಎಚ್.ಎಸ್. ನಾಗರಾಜು ಮತ್ತು ಹೋರಾಟಗಾರ ವೈ.ಕೆ. ಬಾಲಕೃಷ್ಣ ಉಪಸ್ಥಿತರಿದ್ದು ಜಾಣಗೆರೆ ವೆಂಕಟರಾಮಯ್ಯ ಅವರ ಪರ ಬೆಂಬಲ ವ್ಯಕ್ತಪಡಿಸಿದರು.