KN Rajanna: ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ಮಂತ್ರಿಗಿರಿ ಬಿಡಲು ಸಿದ್ಧ: ಕೆ.ಎನ್.ರಾಜಣ್ಣ
ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ಸಿದ್ಧಾಂತ ಇದೆ. ಅದಕ್ಕೆ ನಾನು ಬದ್ಧನಾಗಿದ್ದೇನೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ಮಂತ್ರಿಗಿರಿಯನ್ನು ಬಿಡಲು ಸಿದ್ಧ. ಈ ಮಾತನ್ನು ವರಿಷ್ಠರ ಮುಂದೆ ಸ್ಪಷ್ಟಪಡಿಸಿದ್ದೇನೆ. ಬೇರೆಯವರ ಅಭಿಪ್ರಾಯ ಗೊತ್ತಿಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ಸಹಕಾರ ಸಚಿವ ಕೆ.ಎನ್. ರಾಜಣ್ಣ.

ತುಮಕೂರು: ರಾಜ್ಯದಲ್ಲಿ ಶೋಷಿತರ ಸಮಾವೇಶ ಮಾಡುವ ಸಂಬಂಧ ಈಗಾಗಲೇ ವರಿಷ್ಠರ ಗಮನಕ್ಕೂ ತರಲಾಗಿದೆ. ಸಮಾವೇಶವನ್ನು ಮೈಸೂರು ಭಾಗದ ಬದಲಾಗಿ ಚಿತ್ರದುರ್ಗ, ಹುಬ್ಬಳ್ಳಿ, ಧಾವಣಗೆರೆ ಭಾಗದಲ್ಲಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಈ ಭಾಗದಲ್ಲಿ ಮಾಡಿದರೆ ಸಮಾವೇಶಕ್ಕೆ ಬರಲು ಎಲ್ಲರಿಗೂ ಅನುಕೂಲವಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ (KN Rajanna) ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಿತರ ಸಮಾವೇಶವನ್ನು ಲೋಕಸಭೆ ಅಧಿವೇಶನ ಹಾಗೂ ರಾಜ್ಯದ ಬಜೆಟ್ ಅಧಿವೇಶನದ ಬಳಿಕ ನಡೆಸುವ ಸಾಧ್ಯತೆ ಇದೆ. ಪಕ್ಷದ ಹೈಕಮಾಂಡ್ ಒಪ್ಪಿಗೆ ಮೇರೆಗೆ ಈ ಸಮಾವೇಶ ನಡೆಸಲಾಗುವುದು. ಇದು ದಲಿತ ಸಿಎಂಗಾಗಿ ಮಾಡುತ್ತಿರುವ ಸಮಾವೇಶ ಅಲ್ಲ, ಶೋಷಿತರ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯುವುದಾಗಿ ಅಷ್ಟೇ. ಈ ಸಮಾವೇಶ ಕಾಂಗ್ರೆಸ್ ಪ್ರಾಯೋಜಿತವಾಗಿದ್ದು, ಎಐಸಿಸಿ ಅಧ್ಯಕ್ಷರು, ರಾಹಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ಎಲ್ಲ ನಾಯಕರನ್ನು ಆಹ್ವಾನಿಸಲಾಗುವುದು. ಬೇರೆ ಪಕ್ಷದವರಿಗೆ ಆಹ್ವಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ಸಿದ್ಧಾಂತ ಇದೆ. ಅದಕ್ಕೆ ನಾನು ಬದ್ಧನಾಗಿದ್ದೇನೆ. ಒಂದು ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ಮಂತ್ರಿಗಿರಿಯನ್ನು ಬಿಡಲು ಸಿದ್ಧ. ಈ ಮಾತನ್ನು ವರಿಷ್ಠರ ಮುಂದೆ ಸ್ಪಷ್ಟಪಡಿಸಿದ್ದೇನೆ. ಬೇರೆಯವರ ಅಭಿಪ್ರಾಯ ಗೊತ್ತಿಲ್ಲ. ನಾನು ಕಳೆದ 3 ದಿನಗಳಿಂದ ದೆಹಲಿಯಲ್ಲೇ ಇದ್ದೆ. 2023ರ ಮೇ 18ರಂದು ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದ್ದ ಸುತ್ತೊಲೆಯಲ್ಲಿಯೇ ಮುಂದಿನ ಲೋಕಸಭಾ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರ ಮುಂದುವರಿಕೆ ಎಂಬುದನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ವರಿಷ್ಠರ ಭೇಟಿಯಾದ ಸಂದರ್ಭದಲ್ಲಿ ಗಮನಕ್ಕೆ ತಂದಿದ್ದೇನೆ. ಯಾವ ಲೋಕಸಭಾ ಚುನಾವಣೆ ಎಂಬುದನ್ನು ವರಿಷ್ಠರು ಸ್ಪಷ್ಟಪಡಿಸಬೇಕೆಂದು ಸಹ ಮನವಿ ಮಾಡಿರುವುದಾಗಿ ತಿಳಿಸಿದರು.
5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ
ಮುಖ್ಯಮಂತ್ರಿ ಹುದ್ದೆ ಎರಡೂವರೆ ವರ್ಷಗಳಿಗೆ ಒಪ್ಪಂದ ಆಗಿದೆ ಎಂಬ ಬಗ್ಗೆ 2023ರ ಮೇ 18ರಂದು ಬಿಡುಗಡೆ ಮಾಡಿದ ಪತ್ರದಲ್ಲಿ ಉಲ್ಲೇಖಿಸಿಲ್ಲ. 5 ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಈಗಾಗಲೇ ನಮ್ಮ ಪಕ್ಷದ ಹಿರಿಯ ಸಚಿವರಾದ ಡಾ. ಜಿ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್ ಅವರು ಸಹ ಅದನ್ನೇ ಹೇಳಿದ್ದಾರೆ. ಹಾಗಾಗಿ ನಾನು ಸಹ ಅವರು ಮಾತನ್ನು ನಂಬಿದ್ದೇನೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Karnataka Weather: ಚಳಿಗಾಲದಲ್ಲೂ ಬಿಸಿಲಿನ ಅಬ್ಬರ; ಮುಂದಿನ 6 ದಿನ ರಾಜ್ಯಾದ್ಯಂತ ಒಣ ಹವೆ
ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ಮಾಡಲು ಕೋರಿದ್ದೇನೆ. ಹಾಸನಕ್ಕೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಜಿ.ಪಂ. ಕ್ಷೇತ್ರಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.