ಕೊರಟಗೆರೆ,ಜ.24: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸ್ಥಾಪಿಸಿರುವ ಮಾಹಿತಿ ಮಳಿಗೆಯನ್ನು ಕೊರಟಗೆರೆಯ (Koratagere News) ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಶನಿವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಡಿಸಿ ಶುಭ ಕಲ್ಯಾಣ್ ಅವರು, ರಾಜ್ಯ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡುವುದೇ ಈ ಪ್ರದರ್ಶನದ ಉದ್ದೇಶವಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಶಕ್ತಿ, ಗೃಹಲಕ್ಷ್ಮೀ, ಭಾಗ್ಯಜ್ಯೋತಿ, ಅನ್ನಭಾಗ್ಯ, ಯುವನಿಧಿ ಪಂಚ ಗ್ಯಾರಂಟಿ ಯೋಜನೆಗಳೂ ಸೇರಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಗ್ರಾಮೀಣ ಬಡವರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಯೋಜನೆಗಳನ್ನು ಅರ್ಹ ಫಲಾನುಭವಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ರಾಜ್ಯದ ಬಹುತೇಕ ಜನರು ಸರ್ಕಾರದ ಒಂದಿಲ್ಲೊಂದು ಯೋಜನೆಗಳ ಫಲಾನುಭವಿಯಾಗಿದ್ದಾರೆ ಎಂದ ಅವರು, ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ಯೋಜನೆಗಳ ಮಾಹಿತಿ ಮಳಿಗೆ ಸ್ಥಾಪಿಸಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು.
45 ದಿನದಿಂದ ಏಕಾಏಕಿ ಇ-ಖಾತಾ ಸ್ಥಗಿತ: ಲ್ಯಾಂಡ್ ಡೆವಲಪರ್ಸ್ ಅಸೋಸಿಯೇಷನ್ ಆಕ್ರೋಶ
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಗೋಪಿನಾಥ್, ಪಪಂ ಮಾಜಿ ಸದಸ್ಯ ಓಬಳರಾಜ್, ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಮಂಜುನಾಥ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಅನಂತರಾಮು, ಪಪಂ ಮುಖ್ಯಾಧಿಕಾರಿ ಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.