ಮಧುಗಿರಿ, ಜೂ.27: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಸಮವಸ್ತ್ರ ವಿತರಿಸಲು ಆದಷ್ಟೂ ಬೇಗ ಕ್ರಮಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ರಾಜಣ್ಣ ತಿಳಿಸಿದರು. ಪಟ್ಟಣದ (Madhugiri News) ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಬರುವಂತಹ ಮಕ್ಕಳು ಬಡತನದಿಂದ ಬಂದವರಾಗಿದ್ದು, ಅಂತಹವರ ಸಹಾಯಕ್ಕೆ ಸರ್ಕಾರ ಹಾಗೂ ನಾವು ಬದ್ಧವಾಗಿದ್ದೇವೆ, ಶೈಕ್ಷಣಿಕ ಸಾಲಿನಲ್ಲಿ ಎಲ್‌ಕೆಜಿ ಮತ್ತು ಯುಕೆಜಿಗೆ ಸುಮಾರು 900 ಮಕ್ಕಳು ದಾಖಲಾಗಿದ್ದು, ಅವರಿಗೂ ಸಮವಸ್ತ್ರ ವಿತರಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇತ್ತೀಚಿಗೆ ನಡೆದ ಉದ್ಯೋಗ ಮೇಳದಲ್ಲಿ ಸುಮಾರು 600 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಲ್ಲಿ ಕೆಲವರು ಕನಿಷ್ಠ 25 ರಿಂದ 30 ಸಾವಿರ ಮಾಸಿಕ ವೇತನವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಶಾಸಕರಾದ ಕೆ.ಎನ್. ರಾಜಣ್ಣ ಅವರು ಇತ್ತೀಚೆಗೆ ನೀಡಿದ ಹೇಳಿಕೆಗೂ ನನ್ನ ಸಹಮತವಿದ್ದು ನಾನು ಸಹ ಅವರ ಜತೆಯಲ್ಲಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಲಾಗುವುದು ಎಂದರು.
ಕಾಮ್ಸ್ ಬಗ್ಗೆ ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ಎಂದು ಭರವಸೆ ನೀಡಿದರು. ಇನ್ನೂ ಓಪಿಎಸ್ ಯೋಜನೆಯನ್ನು ಮತ್ತೂಮ್ಮೆ ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು ಎಂದರು.
ಇನ್ನೆರಡು ವರ್ಷದಲ್ಲಿ ನಮ್ಮ ತಾಲೂಕಿನ ಚಿತ್ರಣವನ್ನೇ ಬದಲಾಯಿಸಲಾಗುವುದು. ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ತಾಲೂಕಿನಲ್ಲಿನ ಅಭಿವೃದ್ಧಿ ಕಾಮಗಾರಿಗಳಲ್ಲಿ ಹೆಚ್ಚಿನದಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು ಸುಮಾರು 11 ಕೋಟಿ ರೂಗಳ ಕಾಮಗಾರಿಗಳು ಮುಂದಿನ ದಿನಗಳಲ್ಲಿ ಆರಂಭವಾಗಲಿದೆ ಎಂದರು.
ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ರಮೇಶ್ ಮಾತನಾಡಿ, ಶಿಕ್ಷಕರ ಮಕ್ಕಳ ಜತೆಯಲ್ಲಿ ಅಕ್ಷರ ದಾಸೋಹ ಸಿಬ್ಬಂದಿಗಳ ಮಕ್ಕಳಿಗೂ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಿರುವುದು ಖುಷಿ ತಂದಿದೆ. ರಾಜೇಂದ್ರ ರಾಜಣ್ಣ ಅವರು ನಮ್ಮ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಶಾಸಕರಾದ ಕೆ.ಎನ್. ರಾಜಣ್ಣ ಅವರು ಶೈಕ್ಷಣಿಕ ಸಾಲಿನಲ್ಲಿ ಸರ್ಕಾರದಿಂದ ಆರಂಭವಾಗಿರುವ ಎಲ್ ಕೆ ಜಿ, ಯು.ಕೆ.ಜಿಗೆ ದಾಖಲಾಗಿರುವ ತಾಲೂಕಿನ ವಿದ್ಯಾರ್ಥಿಗಳಿಗೂ ಸಮವಸ್ತ್ರ ವಿತರಣೆಗೆ ಮುಂದಾಗಿದ್ದಾರೆ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ ಮಾತನಾಡಿ, ಪ್ರತಿಭಾನ್ವಿತ ಮಕ್ಕಳು ಹೊಸ ಹೊಸ ಅವಿಷ್ಕಾರಗಳನ್ನು ಅನ್ವೇಷಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಶಿಕ್ಷಕರು ಅನೇಕ ಮಹಾನ್ ಪುರುಷರನ್ನು ಸೃಷ್ಟಿಸುವ ಮೂಲಕ ಸಮಾಜಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಅಕ್ಷರ ದಾಸೋಹ ಸಿಬ್ಬಂದಿಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಸಕರು ಹೆಚ್ಚಿನ ಸಹಕಾರ ನೀಡಬೇಕೆಂದು ಮನವಿ ಮಾಡಿದರು ಎಂದರು.
ಜೂನ್ 28ರಂದು ಬೆಂಗಳೂರಿನ 'ಪರಮ್ ವಿಹಾರ' ವೇದಿಕೆಯಲ್ಲಿ ಸುಗಮ ಸಂಗೀತ-ನೃತ್ಯ ಸಂಗಮ
ಜಿಲ್ಲಾ ಉಪನ್ಯಾಸಕರ ಸಂಘದ ಜಿಲ್ಲಾ ಗೌರವಧ್ಯಕ್ಷ ಎನ್. ಮಹಾಲಿಂಗೇಶ್ ಮಾತನಾಡಿದರು. ಈ ವೇಳೆ ಶಿಕ್ಷಕರು,ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ಮುಖಂಡರು ಇತರರು ಇದ್ದರು.