ಮಧುಗಿರಿ, ಏ.25: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಎಲ್ಲಾ ಜಾತಿಗಳಿಗೂ ಮೀಸಲಾತಿ ಕಲ್ಪಿಸಿದ್ದು, ನಮ್ಮ ಜನಾಂಗದ ಪಾಲನ್ನು ಬೇರೆಯವರು ಬಳಸಿಕೊಂಡು ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಒಳ ಮೀಸಲಾತಿ ಜಾರಿಗೆ ಮಾಡಿರುವುದು ಶ್ಲಾಘನೀಯ. ಇನ್ನಾದರೂ ನಮ್ಮ ಜನಾಂಗದವರು ತಮ್ಮ ಪಾಲನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಪ್ರಗತಿಪರ ಚಿಂತಕ ಡಾ.ನರಸಿಂಹಪ್ಪ ಕಾಳೇನಹಳ್ಳಿ ತಿಳಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಗುಂಡಗಲ್ಲು ಗ್ರಾಮದಲ್ಲಿ ಸ್ನೇಹಜೀವಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಹಾಗೂ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಡಿಭಾಗದ ಕುಗ್ರಾಮದಲ್ಲಿ ಇಂತಹ ಮಹಾತ್ಮರ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಏಕೆಂದರೆ ನಮ್ಮ ಜನಾಂಗದವರು ಎಚ್ಚೆತ್ತುಕೊಳ್ಳಬೇಕಾದರೆ ಪ್ರತಿ ಗ್ರಾಮದಲ್ಲೂ ಅಂಬೇಡ್ಕರ್ ಜಯಂತಿಗಳನ್ನು ಹಾಗೂ ಅವರು ಹಾಕಿಕೊಟ್ಟು ಹೋದ ಮಾರ್ಗಗಳನ್ನು ಪ್ರತಿಯೊಬ್ಬರೂ ನಿರಂತರವಾಗಿ ಆಚರಿಸಿ ಅವರ ಸಿದ್ಧಾಂತಗಳನ್ನು ಪಾಲಿಸುವ ಜತೆಗೆ ಇತರರಿಗೂ ವಿಚಾರಧಾರೆಗಳನ್ನು ತಿಳಿಸಿದರೆ ಮಾತ್ರ ನಮ್ಮ ಜನಾಂಗದ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯದರ್ಶಿ ನಾಗರಾಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ದೇಶವನ್ನು ಮೊದಲು ಆಳಿದವರು ಜಾಂಬವಂತರು ಈ ದೇಶಕ್ಕೆ ಮೊದಲ ಹೆಸರೇ ಜಂಬೂದ್ವೀಪ. ಅಂತಹ ಮೊದಲು ದೇಶವನ್ನಾಳಿದ ಜನಾಂಗದವರನ್ನೇ ಈ ದೇಶದಲ್ಲಿ ಅಸ್ಪೃಶ್ಯತೆಗೆ ಒಳಗಾಗಿಸಿರುವುದು ಶೋಚನೀಯ ಸಂಗತಿ ಎಂದರು. ಅಂಬೇಡ್ಕರ್ ಅವರು ಕೇವಲ ಒಂದು ಜಾತಿಗಾಗಿ ಮೀಸಲಾತಿ ನೀಡಿಲ್ಲ ಪ್ರತಿ ಜನಾಂಗಕ್ಕೂ ಮೀಸಲಾತಿ ನೀಡಿದ್ದಾರೆ ಅವರಂತೆ ನಾವು ಕೂಡ ಶಿಕ್ಷಣ ಪಡೆದು ಜ್ಞಾನವಂತರಾದಾಗ ಮಾತ್ರ ನಾವು ಮುಂದುವರೆಯಲು ಸಾಧ್ಯ ಎಂದರು.
ವಕೀಲ ನರಸಿಂಹಮೂರ್ತಿ ಮಾತನಾಡಿ, ಈ ದೇಶದಲ್ಲಿ ಶೂದ್ರರು ಎಂದರೆ ಕೇವಲ ಒಂದು ಜಾತಿಗೆ ಸೀಮಿತ ಎಂದು ತಿಳಿದಿರುತ್ತಾರೆ. ಆದರೆ ಅದು ತಪ್ಪು ಎಸ್ಸಿ, ಎಸ್ಟಿ, ಒಬಿಸಿಯ ಎಲ್ಲಾ ಜಾತಿಗಳು ಶೂದ್ರರೇ. ಕೇವಲ ನಮ್ಮ ಜಾತಿಯವರನ್ನು ಮಾತ್ರ ಶೂದ್ರದಂತೆ ನೋಡುತ್ತಿರುವುದಕ್ಕೆ ಖಂಡನೆ ವ್ಯಕ್ತಪಡಿಸಿದರು. ನಮ್ಮ ದೇಶದಲ್ಲಿ ಪ್ರತಿ ಕ್ಷೇತ್ರದಲ್ಲೂ ಪ್ರತಿಯೊಬ್ಬರ ಪಾಲು ಇದೆ, ಅದನ್ನು ಶಿಕ್ಷಣದ ಮೂಲಕ ಅರಿತು ಪ್ರತಿಯೊಂದು ಗಳಿಸಿಕೊಳ್ಳಬೇಕು ಎಂದರು.
ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಪತ್ರಕರ್ತ ಮಹರಾಜು ಮಾತನಾಡಿ, ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು ಎಂಬ ಅಂಬೇಡ್ಕರ್ ಅವರ ಮಾತನ್ನು ಅರ್ಥಮಾಡಿಕೊಳ್ಳಿ, ಯಾಕೆಂದರೆ ನಮ್ಮ ಜನಾಂಗದ ಪೂರ್ವ ಇತಿಹಾಸವನ್ನು ತಿಳಿದು ನಾವು ಮುಂದೆ ಸಾಗಿದಾಗ ಯಶಸ್ಸು ಖಂಡಿತ. ಜಂಬೂದ್ವೀಪದ ಪ್ರಥಮ ನಿವಾಸಿ ಆದಿಜಾಂಬವಂತನೆಂಬುದು ಅವರ ಹೆಸರಿನಲ್ಲಿ ತಿಳಿಯುತ್ತದೆ. ಮಹಾಸಾದ್ವಿ ಅರುಂಧತಿಯನ್ನು ಇಂದಿಗೂ ಮದುವೆಯಾಗುವ ನವಜೋಡಿಗಳಿಗೆ ಅರುಂಧತಿ ನಕ್ಷತ್ರ ತೋರಿಸುತ್ತಾರೆ. ರಾಜ ಅಶೋಕ ಚರ್ಕವರ್ತಿಯು ಸೇರಿ ಅನೇಕ ದೈವಿ ಸ್ವರೂಪದ ಮಹಾತ್ಮರು, ಶೂರರು, ದಾರ್ಶನಿಕರು ಹುಟ್ಟಿದ ನಮ್ಮ ಜನಾಂಗದಲ್ಲಿ ಎನ್ನುವ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕಿದೆ. ಇವೆಲ್ಲವೂ ಗಳಿಸಲು ಹಾಗೂ ಸಮುದಾಯ ಅಭಿವೃದ್ಧಿ ಹಾದಿಗೆ ಬರಲು ಮಕ್ಕಳಿಗೆ ಶಿಕ್ಷಣವಂತರಾಗುವಂತೆ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ಗಾಯಕ ಅರಳಾಪುರ ಶಿವಕುಮಾರ್ ಅವರು ಅಂಬೇಡ್ಕರ್ ಅವರ ಕ್ರಾಂತಿ ಗೀತೆಗಳನ್ನು ಹಾಡಿದರು, ಕಾನೂನು ವಿದ್ಯಾರ್ಥಿ ಗಂಗೋತ್ರಿಯಿಂದ ಸಂವಿಧಾನ ಪೀಠಿಕೆ ಬೋಧಿಸಲಾಯಿತು.
Tiptur News: ಏಪ್ರಿಲ್ 29ರಂದು ತಿಪಟೂರಿನ ಕೆಐಟಿ ಕಾಲೇಜಿನಲ್ಲಿ ʼಸಿಸ್ಕೋ ಎಕ್ಸಲೆನ್ಸ್ ಸೆಂಟರ್ʼ ಉದ್ಘಾಟನೆ
ಈ ಸಂದರ್ಭದಲ್ಲಿ ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಹಾಗೂ ಬಸವಣ್ಣನವರ ಭಾವಚಿತ್ರಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಳಸಗಳನ್ನು ಹೊತ್ತ ಹೆಣ್ಣು ಮಕ್ಕಳು, ವಿವಿಧ ರೀತಿಯ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸೌಂಡ್ ಸಿಸ್ಟಮ್ ಹನುಮಂತರಾಯಪ್ಪ, ನವತೇಜ ಶಿಕ್ಷಕ, ಚಿದಾನಂದ, ಸಂಘದ ಅಧ್ಯಕ್ಷ ನವೀನ್ ಕುಮಾರ್, ರವಿಚಂದ್ರ, ನಂಜುಂಡಪ್ಪ, ಗೋವರ್ಧನ, ಹರೀಶ, ತಿಪ್ಪೇಸ್ವಾಮಿ ಮತ್ತು ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.