ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶೋಷಿತ ಸಮುದಾಯಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು: ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ

Madhugiri News: ಶೋಷಿತ ಸಮುದಾಯಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣಕ್ಕೆ ಇರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಶತಮಾನಗಳಿಂದ ತುಳಿತಕ್ಕೊಳಗಾದ ಸಮಾಜಗಳು ಉದ್ದಾರವಾಗಬೇಕಾದರೆ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿಯಬೇಕು. ಇದರಿಂದ ಎಲ್ಲಾ ರೀತಿಯ ಅವಕಾಶಗಳು ದೊರೆಯುತ್ತವೆ ಎಂದು ಹಿರಿಯೂರು ಆದಿಜಾಂಬವ ಬೃಹನ್ಮಠದ ಶ್ರೀ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಮಧುಗಿರಿಯಲ್ಲಿ ನಡೆದ ನ್ಯಾಯವಾದಿ ಬಿ.ನರಸಿಂಹಮೂರ್ತಿರವರ ಸುವರ್ಣ ಮಹೋತ್ಸವದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ.

ಮಧುಗಿರಿ, ಜೂ.29: ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ತಿಳಿದಾಗ ಒಗ್ಗಟ್ಟಿನಿಂದ ಪ್ರಶ್ನಿಸಬೇಕು, ನೀವು ನೇರವಾಗಿ ಪ್ರಶ್ನೆ ಮಾಡದಿದ್ದರೆ ನಿಮ್ಮ ಬದುಕಿಗೆ ಉತ್ತರ ಸಿಗಲ್ಲ. ಈ ಭಾಗದಲ್ಲಿ ನಮ್ಮ ಜನಾಂಗವು ಬಹುಸಂಖ್ಯೆಯಲ್ಲಿದ್ದು ಇನ್ನಷ್ಟು ಅರ್ಥಿಕವಾಗಿ ಮುಂದೆ ಬರಬೇಕಿದೆ. ಅಂತಹ ದಿನಗಳನ್ನು ನಾವೆಲ್ಲರೂ ನೋಡುವಂತಾಗಬೇಕು ಎಂದು ಹಿರಿಯೂರು ಆದಿಜಾಂಬವ ಬೃಹನ್ಮಠದ ಶ್ರೀ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕನ್ನಡಭವನದಲ್ಲಿ ನ್ಯಾಯವಾದಿ ಬಿ. ನರಸಿಂಹಮೂರ್ತಿರವರ ಸುವರ್ಣ ಮಹೋತ್ಸವದ ಅಂಗವಾಗಿ ಕಡಲಾಳದ ಮುತ್ತು ಶೋಷಿತರ ಸ್ವತ್ತು ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಜನಾಂಗದ ಅಭಿವೃದ್ಧಿಗಾಗಿ ಜಾಗೃತಿ ಅವಶ್ಕಕತೆ ಇದ್ದು, ಶೋಷಣೆಯಿಂದ ನೊಂದುಬೆಂದವರ ಕೈ ಹಿಡಿಯುವಲ್ಲಿ ಪ್ರತಿಯೊಬ್ಬರೂ ಮುಂದಾದಾಗ ಮಾತ್ರ ನಮ್ಮ ಸಮುದಾಯ ಆರ್ಥಿಕವಾಗಿ ಸದೃಢವಾಗಲು ಸಾಧ್ಯ. ಶೋಷಿತ ಸಮುದಾಯಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣಕ್ಕೆ ಇರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಶತಮಾನಗಳಿಂದ ತುಳಿತಕ್ಕೊಳಗಾದ ಸಮಾಜಗಳು ಉದ್ಧಾರವಾಗಬೇಕಾದರೆ ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿಯಬೇಕು. ಇದರಿಂದ ಎಲ್ಲಾ ರೀತಿಯ ಅವಕಾಶಗಳು ದೊರೆಯುತ್ತವೆ, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಿದ್ದು, ಇದರಿಂದ ಜಾಗೃತಿ ಮೂಡಿಸಿದಂತಾಗುತ್ತದೆ ಎಂದರು.

ಕಡಲಾಳದ ಮುತ್ತು ಶೋಷಿತರ ಸ್ವತ್ತು ಅಭಿನಂದನಾ ಪುಸ್ತಕ ಬಿಡುಗಡೆಗೊಳಿಸಿದ ಚಲನಚಿತ್ರ ನಟ, ಸಾಮಾಜಿಕ‌ ಹೋರಾಟಗಾರ ಅಹಿಂಸಾ ಚೇತನ್ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬದುಕಿದ್ದಾಗ ಅವರನ್ನು ವಿರೋಧ ಮಾಡಿದವರು ಇಂದು ಅಂಬೇಡ್ಕರ್ ಹೆಸರನ್ನು ಜಪ ಮಾಡುತ್ತಾರೆ. ಇವತ್ತು ಅವರು ಬೆಳೆಯಲು ಅವಶ್ಯಕತೆ ಇದೆ. ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಸಂವಿಧಾನದ ಹೆಸರು ಬಳಸಿಕೊಳ್ಳುವರೇ ಹೆಚ್ಚು. ಆದರೆ ಸಮಾಜದಲ್ಲಿ ನಡೆಯುವ ಶೋಷಣೆ, ಅನ್ಯಾಯದ ವ್ಯವಸ್ಥೆ ವಿರುದ್ಧ ಮಾತನಾಡುವ ಮಂದಿ ಕಡಿಮೆ. ನಾವು ಯಾವುದೇ ಧರ್ಮ-ಜಾತಿಯಲ್ಲೇ ಹುಟ್ಟಿರಬಹುದು, ಆದರೆ ಎಲ್ಲರೂ ಒಂದೇ ಎನ್ನುವ ದೃಷ್ಟಿಕೋನದಿಂದ ಸಮಾಜವನ್ನು ಕಟ್ಟುವ ಮನಸ್ಸು ಎಲ್ಲರಿಗೂ ಬಂದಾಗ ಮಾತ್ರ ಅನ್ಯಾಯ, ಶೋಷಣೆಗಳು ಕಡಿಮೆಯಾಗಿ ಎಲ್ಲರೂ ನೆಮ್ಮದಿ ಬದುಕನ್ನು ಕಟ್ಟಿಕೊಳ್ಳಲು‌ ಸಾಧ್ಯ ಎಂದರು.

ಉತ್ತಮ ಸಮಾಜದ ಕನಸು ಈಡೇರುವುದು ಚಂದ್ರಯಾನ, ಮಂಗಳಯಾನ ಮಾಡಿದಾಗಲ್ಲ, ಜ್ಞಾನಪೀಠ, ಆಸ್ಕ‌ರ್ ಪ್ರಶಸ್ತಿಗಳಿಂದಲ್ಲ. ಇಲ್ಲವೇ ಒಂದು ಸಿನಿಮಾ ಸಾವಿರ ಕೋಟಿ ಗಳಿಸುವುದರಿಂದಲ್ಲ, ಆಡಳಿತ ಪಕ್ಷವನ್ನು ಸೋಲಿಸಿ, ಮತ್ತೊಂದು ಪಕ್ಷವನ್ನು ಅಧಿಕಾರಕ್ಕೆ ತರುವುದರಿಂದಲ್ಲ. ಬದಲಾಗಿ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶಗಳು ದೊರೆಯುವಂತಾಗಬೇಕು. ಶೋಷಿತರು ಸಮಾಜದ ಮುಖ್ಯವಾಹಿನಿಗೆ‌ ಬರಬೇಕು, ಇವೆಲ್ಲವೂ ನೆರವೇರಲು ಅಸಮಾನತೆಯನ್ನು ಹೊಡೆದೋಡಿಸುವ ಪ್ರಬುದ್ಧ ಮನಸ್ಸುಗಳ ಕೈಯಲ್ಲಿ ಅಧಿಕಾರ ಸಿಗಬೇಕು. ಅಧಿಕಾರ ನೀಡುವ ಕೈಗಳು ಸಹ ನಮ್ಮ ಶೋಷಿತ ಸಮುದಾಯಗಳಿಗೆ ಯಾರು ಆಸರೆಯಾಗಿರುತ್ತಾರೆಂದು ಅಲೋಚಿಸಿ ಆಯ್ಕೆ ಮಾಡುವ ಮೂಲಕ ನಿಮ್ಮ ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳಬೇಕು. ಹಾಗಾಗಿ ಇಂತಹ ಜನಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆದಾಗ ಸಮಸಮಾಜ ನಿರ್ಮಾಣಕ್ಕೆ ಜನರಲ್ಲಿ ಜಾಗೃತಿ ಮೂಡಿಸಿದಂತಾಗುತ್ತದೆ‌ ಈ ಕಾರ್ಯಕ್ರಮದ ಆಯೋಜಕರಿಗೆ ಅಭಿನಂದನೆಗಳು ಎಂದು ಸಂತಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಮಾತನಾಡಿ, ನರಸಿಂಹಮೂರ್ತಿಯವರ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಯೋಜಿಸಿರುವುದು ಸಂತಸದ ವಿಷಯವಾಗಿದೆ. ಕಾನೂನು ಕಾಲೇಜಿನಿಂದ ಇವರು ಪರಿಚಿತರಾಗಿದ್ದು, ನಮ್ಮ ತಂದೆಯವರ ಜತೆಯು ಉತ್ತಮ ಒಡನಾಟವಿದೆ, ನಾನು ಸಹ ನಿಮ್ಮ ಸಮಾಜದ ಜತೆಗಿರುವೆ. ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಸಂಘಟಿತ ಹೋರಾಟಗಳಿಗೆ ನನ್ನ ಬೆಂಬಲ ಸದಾ ಇರುತ್ತದೆ ಎಂದು ತಿಳಿಸಿದರು.

Madhugiri News: ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕಿದೆ: ಡಾ.ಶ್ರೀ ಹನುಮಂತನಾಥ ಸ್ವಾಮೀಜಿ

ಡಾ.ನರಸಿಂಹಪ್ಪ ಕಾಳೇನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಮಲನ ಮೂರ್ತಿ, ವಕೀಲ ನರಸಿಂಹಮೂರ್ತಿ ಮಾತನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರು, ಮಾಜಿ ಯೋಧರು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.