ಮಧುಗಿರಿ, ನ.25: ವಿದ್ಯಾರ್ಥಿಗಳೆಲ್ಲರಲ್ಲೂ ಪ್ರತಿಭೆ ಎಂಬುದು ಸುಪ್ತವಾಗಿರುತ್ತದೆ. ಪ್ರತಿಭಾ ಕ್ಷೇತ್ರ ಭಿನ್ನವಾಗಿರಬಹುದು, ಆದರೆ ಸಾಧನೆಗೆ ಪೂರಕವಾದ ವಾತಾವರಣ ಕಲ್ಪಿಸಿದರೆ ಎಲ್ಲ ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎ. ನರಸಿಂಹಮೂರ್ತಿ ತಿಳಿಸಿದರು. ಪಟ್ಟಣದ (Madhugiri News) ಎಂಜಿಎಂ ಶಾಲೆಯಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದ್ದು ಗ್ರಾಮೀಣ ಮಕ್ಕಳು ಅಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾ.ಪಂ.ಇಒ ಉತ್ತಮ್ ಮಾತನಾಡಿ, ಮಕ್ಕಳಿಗೆ ಪಾಠದ ಜತೆಗೆ ಕಲೆ, ಸಾಹಿತ್ಯ, ಸಂಸ್ಕೃತಿಯ ಅಭಿವ್ಯಕ್ತಿಗೆ ವೇದಿಕೆಯಾಗಿರುವ ಪ್ರತಿಭಾ ಕಾರಂಜಿ ಮಕ್ಕಳಲ್ಲಿರುವ ಪ್ರತಿಭೆಯ ಗಣಿಯನ್ನು ಹೊರತೆಗೆಯುವ ಕಾರ್ಯಕ್ರಮವಾಗಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ರಮೇಶ್ ಮಾತನಾಡಿದರು. ತಾಲೂಕಿನ 28 ಕ್ಲಸ್ಟರ್ಗಳ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಜಾನಪದ ನೃತ್ಯ, ಮಿಮಿಕ್ರಿ, ಲಘು ಸಂಗೀತ, ಚಿತ್ರಕಲೆ, ಕ್ಲೇ ಮಾಡಲಿಂಗ್, ಕವನ ವಾಚನ, ಛದ್ಮವೇಷ, ಅಭಿನಯ ಗೀತೆ, ಕಥೆ ಹೇಳುವುದು ಸೇರಿದಂತೆ ಹಲವು ಬಗೆಯ ಚಟುವಟಿಕೆಗಳು ನಡೆದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣವಾಯಿತು.
ಬಿ.ಆರ್.ಸಿ. ಪವನ್ ಕುಮಾರ್ ರೆಡ್ಡಿ, ಪ್ರತಿಭಾ ಕಾರಂಜಿ ನೋಡಲ್ ಕಾಂತಮ್ಮ, ಶಿಕ್ಷಣ ಸಂಯೋಜಕರಾದ ಶ್ರೀನಿವಾಸ್, ರಾಧಾಕೃಷ್ಣ, ರಾಘವೇಂದ್ರ, ಬಿ.ಆರ್.ಪಿ.ಮಂಜುನಾಥ್, ಲಕ್ಷ್ಮಮ್ಮ, ಯಶೋಧಮ್ಮ, ಜಿಪಿಟಿ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತರಾಯ, ಪ್ರಾಥಮಿಕ ಶಾಲಾ ಸಂಘದ ಕಾರ್ಯದರ್ಶಿ ಶಿವಕುಮಾರ್, ಟಿಪಿಒ ಯರಗಾಮಯ್ಯ, ಸಿಆರ್ಪಿಗಳಾದ ಲಕ್ಷ್ಮೀ ನಾರಾಯಣ, ಶ್ರೀಧರ್, ಹರೀಶ್, ಪವಿತ್ರ, ರಂಗನಾಥ್, ಶಿಕ್ಷಕರಾದ ತಿಮ್ಮರಾಜು, ಚೆನ್ನಾರೆಡ್ಡಿ, ಶ್ರೀಕಾಂತ್ ಹಾಜರಿದ್ದರು.