ಮಧುಗಿರಿ, ಜೂ.27: ವಿದ್ಯಾರ್ಥಿಗಳು ಕೇವಲ ಮಾರ್ಕ್ಸ್ ಕಾರ್ಡ್ ಮಕ್ಕಳಾಗದೆ ಸುಸಂಸ್ಕೃತ ಮಕ್ಕಳಾಗಬೇಕಾಗಿದೆ ಎಂದು ಎಲೆರಾಂಪುರದ ಕುಂಚಿಟಿಗ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು. ಪಟ್ಟಣದಲ್ಲಿ (Madhugiri News) ತಾಲೂಕು ಕುಂಚಿಟಿಗ ಒಕ್ಕಲಿಗರ ಸಂಘ, ತಾಲೂಕು ಕುಂಚಿಟಿಗ ಒಕ್ಕಲಿಗ ನೌಕರರ ಸಂಘ ಸಂಯುಕ್ತಾಶ್ರಯದಲ್ಲಿ 2025 -26ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಬಿ.ಎನ್. ಶಂಕರಯ್ಯ ಸ್ಮಾರಕ ಐಟಿಐ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಿ ಶಿಕ್ಷಣದತ್ತ ಗಮನಹರಿಸಿ ಮತ್ತು ಮೌಲ್ಯಾಧಾರಿತ ಶಿಕ್ಷಣ ಪಡೆಯಬೇಕಾಗಿದೆ. ಮಕ್ಕಳ ವಿದ್ಯಾವಂತರಾಗಿ ತಂದೆ-ತಾಯಿಯ ಋಣ ತೀರಿಸಬೇಕು. ಪ್ರಸ್ತುತ ಒಂದು ವರ್ಷಕ್ಕೆ 40 ರಿಂದ 50 ಮಂದಿ ಕುಂಚಿಟಿಗ ವಿದ್ಯಾರ್ಥಿಗಳು ವೈದ್ಯರಾಗುತ್ತಿದ್ದಾರೆ ಎಂದು ತಿಳಿಸಿದರು.
ಶ್ರೀಮಠದ ವತಿಯಿಂದ ತಾಲೂಕಿನ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಉಚಿತ ತರಬೇತಿ ನೀಡಲಾಗುವುದು ಎಂದ ಅವರು, ಕುಂಚಿಟಿಗರಿಗೆ ಓಬಿಸಿ ಮೀಸಲಾತಿ ನೀಡಬೇಕಾಗಿದೆ. 2018ರಲ್ಲಿ ರಾಜ್ಯ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸಿ 2023ರಲ್ಲಿ ಸಚಿವ ಸಂಪುಟದಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿಸಿದರು.
ಕೌಶಲ್ಯ ಅಭಿವೃದ್ಧಿ ನಿಗಮನ ಮಾಜಿ ಅಧ್ಯಕ್ಷ ಮುರಳಿದರ ಹಾಲಪ್ಪ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಹಿಡಿಯಬೇಕು. ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಒಕ್ಕಲಿಗರ ಸಂಘ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಒಂದು ಕೋಟಿ ರೂಗಳ ದತ್ತಿ ನಿಧಿ ಸ್ಥಾಪಿಸುವಂತೆ ಸಲಹೆ ನೀಡಿದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಜಿಲ್ಲೆಯ ಶಿರಾ, ಮಧುಗಿರಿ ತಾಲೂಕಿನಲ್ಲಿ ಹೆಚ್ಚು ಹೆಚ್ಚು ವಿದ್ಯಾವಂತ ಯುವಕರಿದ್ದಾರೆ. ಅವರಿಗೆ ಶಿಕ್ಷಣದ ಜತೆಗೆ ಸಂಸ್ಕಾರವಂತ ಶಿಕ್ಷಣ ನೀಡಬೇಕಾಗಿದೆ. ಮನೆಯಲ್ಲಿ ಸಂಸ್ಕಾರ ಕಲಿಸಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ತುಮುಲ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಾಸ್ಟೆಲ್ ಪ್ರಾರಂಭಿಸಿದ್ದನ್ನು ಅವರು ಸ್ಮರಿಸಿದರು.
ತುಂಗೋಟಿ ರಾಮಣ್ಣ ಮಾತನಾಡಿ , ಕುಂಚಿಟಿಗರಿಗೆ ಓಬಿಸಿ ಮೀಸಲಾತಿ ನೀಡಲು ರಾಜ್ಯ ಸಚಿವ ಸಂಪುಟದಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದ ಸಂದರ್ಭದಲ್ಲಿ ಮಧುಗಿರಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಕೆ.ಎನ್. ರಾಜಣ್ಣ ಅವರ ಪಾತ್ರ ಮಹತ್ತರವಾದದ್ದು ಎಂದು ತಿಳಿಸಿದರು.
ಇದೇ ವೇಳೆ ಕುಂಚಿಟಿಗ ಒಕ್ಕಲಿಗ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಎಲೆರಾಂಪುರದ ಕುಂಚಿಟಿಗ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ಅವರು, ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು ಮತ್ತು ಬಿ.ಜಿ. ಕೀರ್ತಿ ಶ್ರೀ ರಚಿಸಿರುವ ಕೀರ್ತಿ ಕಾವ್ಯಧಾರೆ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು.
Kempegowda Jayanti: ನಾಡು, ನಗರಗಳ ನಿರ್ಮಾಣದಲ್ಲಿ ನಾಡಪ್ರಭು ಕೆಂಪೇಗೌಡರ ದೂರದರ್ಶಿತ್ವ ಅಪ್ರತಿಮ: ತಹಸೀಲ್ದಾರ್ ಮಮತಾ
ಈ ಸಂದರ್ಭದಲ್ಲಿ ತಾಲೂಕು ಕುಂಚಿಟಿಗ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್. ರಾಜಶೇಖರ್, ಗೌರವಾಧ್ಯಕ್ಷ ಡಿ.ಎಸ್. ಸಿದ್ದಪ್ಪ, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಉಮೇಶ್, ಖಜಾಂಚಿ ರಾಮಚಂದ್ರಯ್ಯ, ನಿರ್ದೇಶಕರುಗಳಾದ ಡಾ. ಬಂದ್ರೆ ಹಳ್ಳಿ ಕುಮಾರ, ಎಸ್. ಮೋಹನ್, ಕಾಳೇಗೌಡ, ಚೇತನ ವಿದ್ಯಾ ಸಂಸ್ಥೆ ಕಾರ್ಯದರ್ಶಿ ತುಂಗೋಟಿ ರಾಮಣ್ಣ, ಲಕ್ಷ್ಮಿ ಮಹಿಳಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಸುಧಾ ರಂಗರಾಜು, ಮುಖಂಡರಾದ ವೀರೇಂದ್ರ, ಮಲ್ಲಿಕಾರ್ಜುನಯ್ಯ ಇದ್ದರು.