ತುಮಕೂರು, ಅ.07: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಅ. 9ರಂದು ಶುಕ್ರವಾರ ನಗರದ (Tumkur News) ಹನುಮಂತಪುರದ ಕೊಲ್ಲಾಪುರದಮ್ಮ ಸಭಾಭವನದಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಆರ್. ಕಾಮರಾಜ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾವೇಶವನ್ನು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಉದ್ಘಾಟಿಸುವರು. ಎಲೆರಾಂಪುರ ಕುಂಚಿಟಿಗರ ಮಹಾಸಂಸ್ಥಾನದ ಡಾ. ಹನುಮಂತನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಟ್ರಸ್ಟ್ ಅಧ್ಯಕ್ಷ ಆರ್. ಕಾಮರಾಜ್ ಅಧ್ಯಕ್ಷತೆ ವಹಿಸುವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರೆ, ಲೇಖಕಿ ಮಲ್ಲಿಕಾ ಬಸವರಾಜು ಗಾಂಧೀಜಿ ಬಗ್ಗೆ ಉಪನ್ಯಾಸ ನೀಡುವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಉದ್ಯಮಿಗಳಾದ ಆರ್.ಎಲ್. ರಮೇಶ್‌ಬಾಬು, ಎಸ್.ಪಿ. ಚಿದಾನಂದ್, ಟ್ರಸ್ಟ್ ಉಪಾಧ್ಯಕ್ಷ ಅ.ನ. ಲಿಂಗಪ್ಪ ಭಾಗವಹಿಸುವರು.
ಇದಕ್ಕೂ ಮೊದಲು ಮದ್ಯವ್ಯಸನ ಮುಕ್ತರಾಗಿರುವ ನವಜೀವನ ಸಮಿತಿಯ ಸುಮಾರು 500 ಜನ ಸದಸ್ಯರು ಕೋತಿತೋಪು ವೃತ್ತದಿಂದ ಜಾಥಾದಲ್ಲಿ ಆಗಮಿಸುವರು ಎಂದು ತಿಳಿಸಿದರು.
ಮಹಾತ್ಮ ಗಾಂಧಿಯವರ ದುಶ್ಚಟಮುಕ್ತ ಸಮಾಜ ನಿರ್ಮಾಣದ ಕನಸನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನನಸು ಮಾಡುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಸಹಕಾರದೊಂದಿಗೆ ರಾಜ್ಯಾದ್ಯಂತ ವ್ಯಸನಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವ್ಯಸನಬಾಧಿತ ಕುಟುಂಬಗಳಿಗೆ ಪರಿವರ್ತನೆ ಹೊಂದಲು ಸಹಕಾರ ನೀಡಲಾಗುತ್ತಿದೆ. 30 ವರ್ಷಗಳಿಂದ ಇದೂವರೆಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ 2120 ಮದ್ಯವರ್ಜನ ಶಿಬಿರಗಳನ್ನು ನಡೆಸಿ 1.45 ಲಕ್ಷ ಜನರು ವ್ಯಸನದಿಂದ ಮುಕ್ತಿ ಹೊಂದಲು ಅವಕಾಶವಾಗಿದೆ ಎಂದು ಹೇಳಿದರು.
ವ್ಯಸನಮುಕ್ತರಾದವರಿಗೆ ನವಜೀವನ ಸಮಿತಿಗಳ ಮೂಲಕ ಸಭೆ ಏರ್ಪಡಿಸಿ ಸ್ವಸಹಾಯ, ಸ್ವದ್ಯೋಗ, ವ್ಯಕ್ತಿತ್ವ ವಿಕಸನ, ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರೇರೇಪಣೆ ನೀಡಲಾಗುತ್ತಿದೆ. ರಾಜ್ಯದಲ್ಲಿ 3000ಕ್ಕೂ ಹೆಚ್ಚು ನವಜೀವನ ಸಮಿತಿಗಳ ಮೂಲಕ ಇವರ ಯೋಗಕ್ಷೇಮ ಚಿಂತನೆ ಮಾಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಗಾಂಧಿ ಜಯಂತಿ ಅಂಗವಾಗಿ ಅಕ್ಟೋಬರ್ ತಿಂಗಳಲ್ಲಿ ರಾಜ್ಯಾದ್ಯಂತ 110 ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದರ ಭಾಗವಾಗಿ ಶುಕ್ರವಾರ ನಗರದಲ್ಲಿ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ಜನಜಾಗೃತಿ ಟ್ರಸ್ಟ್ ಉಪಾಧ್ಯಕ್ಷ ಅ.ನ. ಲಿಂಗಪ್ಪ, ಯೋಜನಾಧಿಕಾರಿಗಳಾದ ಪಿ.ಬಿ. ಸಂದೇಶ್, ಪ್ರಭಾಕರ್, ಸಂಯೋಜಕ ಸಂತೋಷ್ ಹಾಜರಿದ್ದರು.