ಚಿಕ್ಕನಾಯಕನಹಳ್ಳಿ, ಏ.6: ದೇಶದ ಮಹತ್ವದ ಜನಗಣತಿ ಪ್ರಕ್ರಿಯೆಯಲ್ಲಿ ಈ ಬಾರಿ ಡಿಜಿಟಲ್ ಕ್ರಾಂತಿ ಆರಂಭವಾಗಿದ್ದು, ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕವೇ ವಿವರಗಳನ್ನು ದಾಖಲಿಸುವ ‘ಸ್ವಯಂ ಗಣತಿʼ ಅಭಿಯಾನಕ್ಕೆ (Census 2027) ಶಾಸಕ ಸಿ.ಬಿ. ಸುರೇಶ್ ಬಾಬು ಅವರು ಸೋಮವಾರ ಚಾಲನೆ ನೀಡಿದರು. ಪಟ್ಟಣದ (Chikkanayakanahalli News) ತೀನಂಶ್ರೀ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಶಾಸಕರು ಸ್ವತಃ ತಮ್ಮ ಮೊಬೈಲ್ ಮೂಲಕ ವೈಯಕ್ತಿಕ ವಿವರಗಳನ್ನು ಪೋರ್ಟಲ್‌ನಲ್ಲಿ ದಾಖಲಿಸುವ ಮೂಲಕ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಗಮನ ಸೆಳೆದರು.
ಬಳಿಕ ಮಾತನಾಡಿದ ಶಾಸಕ ಸಿ.ಬಿ. ಸುರೇಶ್ ಬಾಬು, ʼಜನಗಣತಿಯು ದೇಶದ ಭವಿಷ್ಯದ ಯೋಜನೆಗಳ ರೂಪಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಏಪ್ರಿಲ್ 1 ರಿಂದ 15 ರವರೆಗೆ ಸಾರ್ವಜನಿಕರು ತಮ್ಮ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಮಾಹಿತಿ ಭರ್ತಿ ಮಾಡಲು ಅವಕಾಶವಿದೆ. ನಾನೇ ಇಂದು ನನ್ನ ವಿವರ ದಾಖಲಿಸಿದ್ದು, ಇದು ಅತ್ಯಂತ ಸರಳ ಮತ್ತು ಸುರಕ್ಷಿತವಾಗಿದೆ. ಏಪ್ರಿಲ್ 15 ರ ನಂತರ ಮೇ 15 ರವರೆಗೆ ಗಣತಿದಾರರು ಪ್ರತಿಯೊಬ್ಬರ ಮನೆ ಮನೆಗೆ ಬರಲಿದ್ದಾರೆ. ಸಾರ್ವಜನಿಕರು ಈ ಡಿಜಿಟಲ್ ಇಂಡಿಯಾ ಯೋಜನೆಯ ಸದುಪಯೋಗ ಪಡೆಯಬೇಕುʼ ಎಂದು ಕರೆ ನೀಡಿದರು.
ನ್ಯಾಯಾಧೀಶರ ಕೊರತೆ: ಚಿಕ್ಕನಾಯಕನಹಳ್ಳಿ ಕೋರ್ಟ್‌ನಲ್ಲಿ ಬರೋಬ್ಬರಿ 3,500 ಪ್ರಕರಣ ಬಾಕಿ
ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಮಾತನಾಡಿ, ʼಪುರಸಭೆ ವ್ಯಾಪ್ತಿಯಲ್ಲಿ ಜನಗಣತಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಗರಿಕರು ಆನ್‌ಲೈನ್‌ನಲ್ಲಿ ಮಾಹಿತಿ ಭರ್ತಿ ಮಾಡಿದ ನಂತರ ಲಭಿಸುವ 'ರೆಫರೆನ್ಸ್ ಸಂಖ್ಯೆ' ಯನ್ನು ಜಾಗರೂಕತೆಯಿಂದ ಇಟ್ಟುಕೊಳ್ಳಬೇಕು. ಗಣತಿದಾರರು ನಿಮ್ಮ ಮನೆಗೆ ಭೇಟಿ ನೀಡಿದಾಗ ಈ ಸಂಖ್ಯೆಯನ್ನು ತೋರಿಸಿದರೆ ನಿಮ್ಮ ಕೆಲಸ ಸುಲಭವಾಗಲಿದೆ. ನಾಗರಿಕರು ಯಾವುದೇ ಆತಂಕವಿಲ್ಲದೆ ನಿಖರವಾದ ಮಾಹಿತಿಯನ್ನು ನೀಡಿ ಸಹಕರಿಸಬೇಕುʼ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಮತಾ, ಹಿರಿಯ ಪರಿಸರ ಇಂಜಿನಿಯರ್ ನರಸಿಂಹಮೂರ್ತಿ ಉಪಸ್ಥಿತರಿದ್ದರು.