ಚಿಕ್ಕನಾಯಕನಹಳ್ಳಿ, ಫೆ.25: ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳೇ ನೇರ ಕಾರಣ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ಆರೋಪಿಸಿದರು. ಬುಧವಾರ ತಾಲೂಕು ಪಂಚಾಯಿತಿ (Chikkanayakanahalli News) ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯು ಅಧಿಕಾರಿಗಳ ಬೇಜವಾಬ್ದಾರಿಯ ವಿರುದ್ಧ ಜನಪ್ರತಿನಿಧಿಗಳ ಆಕ್ರೋಶಕ್ಕೆ ವೇದಿಕೆಯಾಯಿತು.
ಅಬಕಾರಿ ಇಲಾಖೆಗೆ ನೋಟಿಸ್
ಸಭೆಗೆ ಮುನ್ಸೂಚನೆ ನೀಡದೆ ಗೈರಾದ ಅಬಕಾರಿ ಇನ್ಸ್‌ಪೆಕ್ಟರ್ ವರ್ತನೆಗೆ ಎಂಎಲ್ಸಿ ರಮೇಶ್ ಬಾಬು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ನೋಟಿಸ್ ಜಾರಿಗೆ ಸೂಚಿಸಿದರು. ಸಿಂಗದಹಳ್ಳಿ ರಾಜ್‌ಕುಮಾರ್ ಮಾತನಾಡಿ, "ಅಧಿಕಾರಿಗಳ ಲೆಕ್ಕದಲ್ಲಿ 29 ಮದ್ಯ ಮಾರಾಟ ಕೇಂದ್ರಗಳಿರಬಹುದು, ಆದರೆ ವಾಸ್ತವದಲ್ಲಿ 29 ಸಾವಿರ ಅಕ್ರಮ ಮದ್ಯದ ಪಾಯಿಂಟ್‌ಗಳಿವೆ" ಎಂದು ಲೇವಡಿ ಮಾಡಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ದೇವಾಲಯಗಳ ಹೆಸರಿನಲ್ಲಿ ನಡೆಯುವ ಮದ್ಯ ಹರಾಜು ಪದ್ಧತಿ ನಿಲ್ಲಿಸಲು ಆಗ್ರಹಿಸಿದರೆ, ಮುಖಂಡ ಹೊನ್ನೆಬಾಗಿ ಶಶಿಧರ್, ಹಳ್ಳಿಗಳ ಮದ್ಯ ಮುಕ್ತಕ್ಕೆ ಒತ್ತಾಯಿಸಿದರು.
ಅಂಕಿ-ಅಂಶಗಳ ಗೊಂದಲ
ಆರೋಗ್ಯ ಇಲಾಖೆಯಲ್ಲಿ ಹೆರಿಗೆ ಮತ್ತು ಲಸಿಕೆ ಕಾರ್ಯಕ್ರಮಗಳ ಅಂಕಿ-ಅಂಶಗಳು ತಾಳೆಯಾಗದ ಬಗ್ಗೆ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ತೋಟಗಾರಿಕೆ ಇಲಾಖೆಯಲ್ಲಿ 70 ಸಾವಿರ ಮಾನವ ದಿನಗಳ ಗುರಿಯಿದ್ದರೂ ಕೇವಲ 5 ಸಾವಿರ ದಿನ ಸೃಜಿಸಿದ್ದಕ್ಕೆ ಸದಸ್ಯ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ, ಮೀನುಗಾರಿಕೆ ಅಧಿಕಾರಿಗಳು ಅಪೂರ್ಣ ಮಾಹಿತಿ ತಂದಿದ್ದರೆ, ಪುರಸಭೆ ಅಧಿಕಾರಿಗಳು ಮಾಹಿತಿಯನ್ನೇ ನೀಡದೆ ಸಭೆಯ ಕೆಂಗಣ್ಣಿಗೆ ಗುರಿಯಾದರು.
ಬಿಇಒಗೆ ನಗೆಚಟಾಕಿ
ಶಿಕ್ಷಣ ಇಲಾಖೆಯ ಮಾಹಿತಿ ನೀಡಲು ಬಿಇಒ ಕಾಂತರಾಜು ಎದ್ದು ನಿಂತು ವಿವರಣೆ ನೀಡಲು ಮುಂದಾದಾಗ, ಶಾಸಕರು ಮಧ್ಯಪ್ರವೇಶಿಸಿ ಇಲ್ಲಿ ಒಂದು ಪಿರಿಯಡ್ ಪಾಠ ಮಾಡಬೇಡ, ಕೇಳಿದ ಪ್ರಶ್ನೆಗೆ ಒಂದು ಲೈನ್‌ನಲ್ಲಿ ಉತ್ತರಿಸು ಎಂದು ಹೇಳಿದಾಗ ಸಭೆಯಲ್ಲಿ ನಗೆಯ ಅಲೆ ಎದ್ದಿತು.
ಸಭೆಯ ಪ್ರಮುಖ ನಿರ್ಧಾರಗಳು
ತಾಲೂಕಿನಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನಿಗಾ ವಹಿಸಲು ತಹಸೀಲ್ದಾರ್ ಮಮತಾ ಅವರು ಪ್ರತಿ ವಾರ ಕುಡಿಯುವ ನೀರಿನ ಟಾಸ್ಕ್ ಫೋರ್ಸ್ ಸಭೆ ನಡೆಸಬೇಕು ಎಂದು ಶಾಸಕರು ನಿರ್ದೇಶನ ನೀಡಿದರು. ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಪ್ರತಿ ಮಗುವಿಗೂ ತಲಾ ಒಂದು ಗಿಡ ವಿತರಿಸಲು ಹಾಗೂ ಕುಪ್ಪೂರು ಮತ್ತು ದೊಡ್ಡ ಎಣ್ಣೇಗೆರೆ ಪಶು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಅರಣ್ಯ ಕಾಯ್ದೆಯ ಸೆಕ್ಷನ್ 4 ಅಡಿಯಲ್ಲಿ ಪ್ರಾಥಮಿಕ ಅಧಿಸೂಚನೆಯಷ್ಟೇ ಆಗಿರುವ ಜಮೀನುಗಳಲ್ಲಿ ರೈತರಿಗೆ ತೊಂದರೆ ನೀಡಬಾರದು ಪಹಣಿ ಇರುವ ರೈತರು ತಮ್ಮ ಜಮೀನಿನಲ್ಲಿ ಬೋರ್‌ವೆಲ್ ಹಾಕಿಸಲು ಅರಣ್ಯ ಅಧಿಕಾರಿಗಳು ಯಾವುದೇ ಅಡ್ಡಿ ಮಾಡಬಾರದು ಎಂದು ಎಂಎಲ್‌ಸಿ ರಮೇಶ್ ಬಾಬು ಕಟ್ಟುನಿಟ್ಟಿನ ಸೂಚನೆ ನೀಡಿದರು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಮೂಮೆಂಟ್ ರಿಜಿಸ್ಟರ್ ನಿರ್ವಹಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.
ಹುಳಿಯಾರು, ಹಂದನಕೆರೆ ಠಾಣೆಗಳಿಗೆ ಬೇಕಿದೆ 'ಕಾಯಂ' ಸಾರಥಿ: ಪ್ರಭಾರ ಹೊರೆಯಿಂದ ತಿಪಟೂರು ಪಿಎಸ್‌ಐ ಯತೀಶ್ ಹೈರಾಣ!
ಸಭೆಯಲ್ಲಿ ತಾ.ಪಂ. ಆಡಳಿತಾಧಿಕಾರಿ ಲಕ್ಷ್ಮಣ್ ಕಳ್ಳೆನ್ನವರ್, ಇಓ ದೊಡ್ಡಸಿದ್ದಯ್ಯ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಕೆಡಿಪಿ ಸದಸ್ಯರು ಉಪಸ್ಥಿತರಿದ್ದರು.