ತುಮಕೂರು: ಸಿಎಂ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹಲವು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ನಡುವೆ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ (SR Srinivas) ಅವರು ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ತುಮಕೂರಿನಲ್ಲಿ ಈ ಕುರಿತು ಮಾತನಾಡಿರುವ ಅವರು, ಜನ ನನಗೆ ಸಚಿವ ಸ್ಥಾನ ಕೊಡಬೇಕು ಎಂದು ಕೇಳುತ್ತಾರೆ. ಆದರೆ ರಾಜಕೀಯದಲ್ಲಿ ನಮ್ಮಂಥ ಸಾಮಾನ್ಯ ರೈತನ ಮಗ ಮೇಲೆ ಬರೋದು ಕಷ್ಟ. ಯಾರಾದರೂ ತಲೆ ಹೊಡೆದು ಹಣ ಸಂಪಾದನೆ ಮಾಡಿರಬೇಕು, ಅಂಥವರು ಮೇಲಕ್ಕೆ ಬರುತ್ತಾರೆ. ಜಗಳ ಮಾಡಿ ತೆಗೆದುಕೊಳ್ಳಲು ಅದೇನು ನಮ್ಮ ಅಪ್ಪನ ಆಸ್ತಿ ಅಲ್ಲ. ನಮಗೆ ಯೋಗ್ಯತೆ ಇಲ್ಲ ಅಂತ ಅರ್ಥ. ನಮಗೆ ಗಾಡ್ ಫಾದರ್ ಇರಲಿಲ್ಲ, ಹಾಗಾಗಿ ಸಚಿವ ಸ್ಥಾನ ತಪ್ಪಿದೆ ಎಂದು ಬೇಸರ ಹೊರಹಾಕಿದ್ದಾರೆ.
ರಾಜಕೀಯದ ಹೊಸ ಪಾಠ ಈಗ ಅರ್ಥ ಆಗುತ್ತಿದೆ. ಗುರುತಿಸುತ್ತಾರೆ ಎಂದು ಅಂದುಕೊಂಡಿದ್ದೆ. ಈಗ ಎಲ್ಲವೂ ಮೀರಿ ಹೋಗಿದೆ. ಪ್ರಾಮಾಣಿಕತೆಗೆ ಬೆಲೆ ಎಷ್ಟಿದೆ ಅನ್ನೋದು ಈಗ ಗೊತ್ತಾಗಿದೆ. ರಾಜಕೀಯ ಡಬಲ್ ಗೇಮ್, ಮೋಸದಿಂದ ಕೂಡಿದೆ. ಅವಕಾಶ ಸಿಗುತ್ತೆ ಅಂದುಕೊಂಡಿದ್ದೆ. ಈಗ ಅವಕಾಶ ವಂಚಿತನಾಗಿದ್ದೇನೆ. ನಮ್ಮ ಜಿಲ್ಲೆಗೆ ಇನ್ನೊಂದು ಸ್ಥಾನ ಕೊಡಬಹುದಿತ್ತು. ಬಡವನ ಕೋಪ ದವಡೆಗೆ ಮೂಲ. ಇನ್ನೂ ಒಂದೂವರೆ ವರ್ಷ ಸಮಯ ಇದೆ. ಕಾರ್ಯಕರ್ತರು ಏನು ತೀರ್ಮಾನ ಮಾಡುತ್ತಾರೋ ನೋಡೋಣ. ನಾನೂ ನಿಗಮ ಮಂಡಳಿಗೆ ರಾಜೀನಾಮೆ ಕೊಡುತ್ತೇನೆ. ಕೆಎಸ್‌ಆರ್‌ಟಿಸಿ ನಷ್ಟದಲ್ಲಿ ಇದೆ. ಏನೂ ಸಾಧನೆ ಮಾಡಲು ಆಗಲ್ಲ. ಹಾಗಾಗಿ ನಾನು ನಾಳೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದರು.
ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕಾರ: ಶಾಸಕರಿಗೆ ಸಿಎಂ ಎಚ್ಚರಿಕೆ
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರುಗಳು ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅವರ ರಾಜೀನಾಮೆಯನ್ನು ಅಂಗೀಕರಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ನಂತರ ಸಚಿವ ಸ್ಥಾನ ವಂಚಿತ ಶಾಸಕರುಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿರುವ ಬಗ್ಗೆ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ರಾಜೀನಾಮೆ ಕೊಡುವುದು ಎಲ್ಲ ರಾಜಕೀಯದಲ್ಲಿ ನಡೆಯುತ್ತಾ ಇರುತ್ತದೆ. ರಾಜೀನಾಮೆ ಕೊಡುವವರನ್ನು ಯಾರೂ ತಡೆಯಲು ಆಗಲ್ಲ. ರಾಜೀನಾಮೆ ನೀಡಿದರೆ ಅಂತಹ ಶಾಸಕರ ರಾಜೀನಾಮೆಯನ್ನು ಕೆಲವೇ ಕ್ಷಣಗಳಲ್ಲಿ ಅಂಗೀಕರಿಸುತ್ತೇನೆ ಎಂದಿದ್ದಾರೆ.
ಪಕ್ಷ ಬೇಕು, ಭವಿಷ್ಯ ಬೇಕು ಎಂದರೆ ಶಾಸಕರು ಪಕ್ಷದಲ್ಲಿ ಇರಲಿ. ಪಕ್ಷ ಇದ್ದರೆ ಎಲ್ಲಾ ಎಂದು ಅವರು ಮಾರ್ಮಿಕವಾಗಿ ಅವರು ಹೇಳಿದ ಅವರು, ನಿನ್ನೆ ರಾತ್ರಿಯೇ ನಾನು ಏನು ಹೇಳಬೇಕೋ ಎಲ್ಲಾ ಹೇಳಿದ್ದೇನೆ. ಎಲ್ಲಾ ಸಂದರ್ಭದಲ್ಲೂ ತಾಳ್ಮೆಯಿಂದ ಇರಬೇಕಾಗುತ್ತದೆ. ಪಕ್ಷ ತುಂಬಾ ತಿಳಿಸಿದ್ದಾರೆ.