ಪಾವಗಡ, ಸೆ. 11: ಆಂಧ್ರ ಪ್ರದೇಶ ಹಾಗೂ ತುಮಕೂರಿನ ಪಾವಗಡ ಗಡಿಭಾಗದಲ್ಲಿ ನಿಷ್ಕ್ರಿಯವಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಆರಂಭವಾಗಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ (ಸೆಪ್ಟೆಂಬರ್ 10) ರಾತ್ರಿ ಗಂಗಸಾಗರದ ರೈತರೊಬ್ಬರ ತೋಟದ ಗೇಟ್‌ನಲ್ಲಿ ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿಯ (PWJ) ಕಾಮ್ರೇಡ್ ದೇವನ್ನ ದಳಂ ಹೆಸರಿನಲ್ಲಿ 5 ಲಕ್ಷ ರೂಪಾಯಿ ಬೇಡಿಕೆಯಿಟ್ಟ ಪತ್ರವನ್ನು ಅಂಟಿಸಿರುವುದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪತ್ರದಲ್ಲಿ ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ, ದೇವನ್ನ ದಳಂ ಆಂಧ್ರ ಪ್ರದೇಶ ಎಂಬ ವಿಳಾಸ ಉಲ್ಲೇಖಿಸಲಾಗಿದೆ.
ಈ ಪತ್ರದಲ್ಲಿ, ʼʼತಾಲೂಕಿನ ಗಂಗಸಾಗರದ ನಿವಾಸಿ ಮುತ್ತ ಕುಂಟ್ಲ ಭೂಷಪ್ಪ ಅವರಿಗೆ ಕಾಡ್ ದೇವನ್ನ ಮಾಡುವ ನಮಸ್ಕಾರಗಳು. ಸ್ವಚ್ಛ ಸಮಾಜ ಹಾಗೂ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ನಮ್ಮ ಹೋರಾಟʼʼ ಎಂದು ಪೀಠಿಕೆಯಲ್ಲಿ ಬರೆಯಲಾಗಿದೆ.
ʼʼಈ ಪ್ರಯತ್ನ ನಿರಂತರವಾಗಿ ಮುಂದುವರಿಯುತ್ತಿದೆ. ಎಲ್ಲಿ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತೋ ಅಲ್ಲಿ ಹಾಗೂ ಬಡವರ ಮೇಲೆ ವಿನಾಕಾರಣ ದಾಳಿ ನಡೆಸಿದರೆ ಅಲ್ಲಿ ಸಂಘಟನೆ ನಮ್ಮದೇ ಅದ ರೀತಿಯಲ್ಲಿ ಕಾರ್ಯನಿರ್ವಹಿಸಿ ಅನ್ಯಾಯ ಮತ್ತು ದೌರ್ಜನ್ಯಕ್ಕೆ ಒಳಗಾದವರ ಪರ ಕೆಲಸ ಮಾಡಿ ರಕ್ಷಣೆ ಹಾಗೂ ನ್ಯಾಯ ಕಲ್ಪಿಸಲಿದೆ. ತಾಲೂಕಿನ ಗಂಗಸಾಗರದ ಸಮೀಪ ಪೊನ್ನಸಮುದ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನಿಕಲಬಂಡೆ ಗ್ರಾಮದಲ್ಲಿ ರಾಜಕೀಯ ಪಿತೂರಿ ಹಾಗೂ ದೌರ್ಜನ್ಯ ಹೆಚ್ಚಾಗುತ್ತಿದ್ದು, ಇದೇ ಗ್ರಾಮದ ಉಪ್ಪಾರ ವೆಂಕಟೇಶ್ ಮೇಲೆ ಗುಂಡಾಗಿರಿ ಹಾಗೂ ದೌರ್ಜನ್ಯ ನಡೆಯುತ್ತಿದ್ದು, ಅವರಿಗೆ ಹಿಂಸೆ ಕೊಡುತ್ತಿದ್ದಾರೆ. ಅವರ ನೋವಿಗೆ ಸ್ಪಂದಿಸಿ, ಕಾಮ್ರೇಡ್ ದೇವನ್ನ ದಳಂ ಪಾರ್ಟಿ ತಾಲೂಕಿಗೆ ಪ್ರವೇಶ ಮಾಡಿದ್ದು, ಕನಿಕಲಬಂಡೆ ಗ್ರಾಮದಲ್ಲಿದೌರ್ಜನ್ಯ ನಡೆಸುತ್ತಿರುವವರ ಮಾಹಿತಿ ಸಂಗ್ರಹಿಸಲಾಗಿದೆʼʼ ಎಂದು ಬರೆಯಲಾಗಿದೆ.
ಅಂತೂ ಇಂತೂ ಅಂತ್ಯ ಕಾಣುತ್ತಿರುವ ರಕ್ತಸಿಕ್ತ ನಕ್ಸಲ್ ವಾದ
ಮುಂದುವರಿದು, ʼʼಶೀಘ್ರ ಅವರ ದೌರ್ಜನ್ಯ ಮಟ್ಟ ಹಾಕಲಿದ್ದೇವೆ. ಇದೇ ಗ್ರಾಮದ ಉಪ್ಪಾರ ವೆಂಕಟೇಶ್ ವಿರುದ್ಧ ಕೇಸುಗಳಿದ್ದು, ಹಣದ ಅಗತ್ಯವಿದೆ. ಪಕ್ಷದ ಬೆಳವಣಿಗೆಗೆ ಸಹಕರಿಸಬೇಕು. ಹೀಗಾಗಿ ಸೆಪ್ಟೆಂಬರ್ 16ರೊಳಗೆ ವಕೀಲ ಸುಬ್ಬರಾಯಪ್ಪ ಅವರ ಬಳಿ 5 ಲಕ್ಷ ರೂಪಾಯಿ ಕಳುಹಿಸಿ ಕೊಡಬೇಕು. ನಿಮಗೆ ತೊಂದರೆ ಆದರೆ ನಿಮ್ಮ ಬೆಂಬಲವಾಗಿರುತ್ತೇವೆ. ಇಲ್ಲವಾದರೆ ಪರಿಣಾಮ ಎದುರಿಸಬೇಕಾಗುತ್ತದೆ. ಜತೆಗೆ ಈ ವಿಷಯ ಪೊಲೀಸರಿಗಾಗಲಿ ಅಥವಾ ಯಾರಿಗಾ ದರೂ ಹೇಳಿದರೆ ಅದರ ಮುಂದಿನ ಅನಾಹುತ ಎದುರಿಸಬೇಕಾಗಿದೆʼʼ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಪತ್ರ ಪತ್ತೆಯಾಗಿದ್ದು ಹೇಗೆ?
ತೋಟದ ಬಳಿ ಹೋಗಿದ್ದ ವೇಳೆ ರೈತ ಮುತ್ತಕುಂಟ್ಲ ಭೂಷಪ್ಪ ಅವರಿಗೆ ಗೇಟ್‌ಗೆ ಅಂಟಿಸಿದ್ದ ಪತ್ರ ಸಿಕ್ಕಿದ್ದು, ನಿಜವಾಗಿಯೂ ಅದೇ ಸಂಘಟನೆಯ ಪತ್ರವೇ ಅಥವಾ ಅವರ ಹೆಸರಿನಲ್ಲಿ ಯಾರಾದರೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪಾವಗಡ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ವಿಷಯ ಹೊರಬೀಳುತ್ತಿದ್ದಂತೆ ಕನಿಕಲಬಂಡೆ, ಗಂಗಸಾಗರ, ಪೊನ್ನ ಸಮುದ್ರ, ಕೆಂಚಗಾನಹಳ್ಳಿ, ಅಚ್ಚಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.