ತುಮಕೂರು, ಜೂ. 11: ಸರ್ಕಾರಿ ನಿಯಮ ಉಲ್ಲಂಘಿಸಿ 10 ಕೋಟಿ ರುಪಾಯಿಗೂ ಅಧಿಕ ರಾಯಧನ ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಪಾವಗಡ ಕಾಂಗ್ರೆಸ್ ಶಾಸಕ ವೆಂಕಟೇಶ್, ಪತ್ನಿ ಶಶಿಕಲಾ ಒಡೆತನದ ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಆದೇಶ ಹೊರಡಿಸಿದೆ (Pavagada News). ಪಾವಗಡ ತಾಲೂಕಿನ ತಿಪ್ಪಯ್ಯನದುರ್ಗ ಗ್ರಾಮದ ಸರ್ವೆ ನಂಬರ್ 42ರಲ್ಲಿ ನಡೆಯುತ್ತಿದ್ದ ವೆಂಕಟೇಶ್ವರ ಸ್ಟೋನ್ ಕ್ರಷರ್ 10,28,67,402 ರುಪಾಯಿ ರಾಯಧನ ಬಾಕಿ ಉಳಿಸಿಕೊಂಡಿದ್ದು, ನಿಗದಿತ ಪ್ರದೇಶಕ್ಕಿಂತ ಹೆಚ್ವು ಒತ್ತುವರಿ ಮಾಡಿ ಕಾನೂನುಬಾಹಿರ ಗಣಿಗಾರಿಕೆ ನಡೆಸಿರುವುದು ಹಾಗೂ ಪರಿಸರ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಆದೇಶಿಸಿದೆ.
ಎಚ್.ವಿ. ವೆಂಕಟೇಶ್ ಅವರಿಗೆ ತಿಪ್ಪಯ್ಯನದುರ್ಗದ ಸರ್ವೆ ನಂ. 42ರ 5 ಎಕ್ರೆ ಸರ್ಕಾರಿ ಜಮೀನಿನಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗಾಗಿ 2014ರ ಡಿಸೆಂಬರ್ 16ರಿಂದ 10 ವರ್ಷಗಳ ಅವಧಿಗೆ ಮೊದಲ ಬಾರಿಗೆ ಗುತ್ತಿಗೆ ನೀಡಲಾಗಿತ್ತು. ನಂತರ ಕೆ.ಎಂ.ಎಂ.ಸಿ.ಆರ್-1994ರ ನಿಯಮಗಳನ್ವಯ ಗುತ್ತಿಗೆ ಅವಧಿಯನ್ನು 30 ವರ್ಷಗಳವರೆಗೆ ಅಂದರೆ 2044ರ ಡಿಸೆಂಬರ್ 15ರವರೆಗೆ ವಿಸ್ತರಿಸಲಾಗಿತ್ತು.
10 ಕೋಟಿ ರುಪಾಯಿಗೂ ಅಧಿಕ ಬಾಕಿ
2024-25ನೇ ಸಾಲಿನ ಅಂತ್ಯಕ್ಕೆ ಈ ಗುತ್ತಿಗೆಯ ಮೇಲೆ ಒಟ್ಟು 13,84,95,693 (ಹದಿಮೂರು ಕೋಟಿ ಎಂಬತ್ತನಾಲ್ಕು ಲಕ್ಷದ ತೊಂಬತ್ತೈದು ಸಾವಿರದ ಆರುನೂರ ತೊಂಬತ್ಮೂರು) ರುಪಾಯಿ ಬಾಕಿ ಉಳಿಸಿಕೊಳ್ಳಲಾಗಿತ್ತು. ಈ ಸಂಬಂಧ ಇಲಾಖೆಯು ಕಾರಣ ಕೇಳಿ ನೊಟೀಸ್ ಜಾರಿ ಮಾಡಿತ್ತು. ಇದರ ವಿರುದ್ಧ ಗುತ್ತಿಗೆದಾರರು ಮೈಸೂರಿನ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪರಿಷ್ಕರಣಾ ಅರ್ಜಿ ಸಲ್ಲಿಸಿ ಯಾವುದೇ ಕ್ರಮ ಜರುಗಿಸದಂತೆ ಕೋರಿದ್ದ ಮನವಿಯನ್ನು ಇಲಾಖೆ ತಿರಸ್ಕರಿಸಿತ್ತು.
ಬಳಿಕ ಬಾಕಿ ಮೊತ್ತದಲ್ಲಿ ಕೇವಲ 2,76,91,938 (ಎರಡು ಎಪ್ಪತ್ತಾರು ಲಕ್ಷ ತೊಂಬತ್ತೊಂದು ಸಾವಿರದ ಒಂಬೈನೂರ ಮೂವತ್ತೆಂಟು) ರುಪಾಯಿ ಮಾತ್ರ ಪಾವತಿಸಿ, ಉಳಿಕೆ ಮೊತ್ತವನ್ನು ಸರ್ಕಾರದ ಏಕಕಾಲದ ಇತ್ಯರ್ಥ ಯೋಜನೆಯಡಿ ಪಾವತಿಸುವುದಾಗಿ ಗುತ್ತಿಗೆದಾರರು ಪ್ರಮಾಣಪತ್ರ ಸಲ್ಲಿಸಿದ್ದರು.
ಡಿಜಿಪಿಎಸ್ ಸರ್ವೆಯಲ್ಲಿ ಬಯಲಾದ ಅಕ್ರಮ
ಏಪ್ರಿಲ್ 2ರಂದು ಪಾವಗಡ ತಹಶೀಲ್ದಾರ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ವಲಯ ಅರಣ್ಯಾಧಿಕಾರಿಗಳು, ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಗಣಿ ಇಲಾಖೆಯ ತಾಂತ್ರಿಕ ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡವು ಸ್ಥಳಕ್ಕೆ ಭೇಟಿ ನೀಡಿ ಅತ್ಯಾಧುನಿಕ ಡ್ರೋನ್ ಹಾಗೂ ಡಿಜಿಪಿಎಸ್ ಸರ್ವೆ ನಡೆಸಿತ್ತು. ಮಂಜೂರಾದ 5 ಎಕರೆ ಪ್ರದೇಶದ ಹೊರತಾಗಿ ಗುತ್ತಿಗೆ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಉತ್ತರ ಭಾಗದಲ್ಲಿ 0-17 ಎಕರೆ ಹಾಗೂ ಪೂರ್ವ, ಪಶ್ಚಿಮ, ದಕ್ಷಿಣ ಭಾಗಗಳಲ್ಲಿ 5-17 ಎಕರೆ ಸೇರಿ ಒಟ್ಟು 5-34 ಎಕರೆ/ಗುಂಟೆ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿರುವುದು ಸ್ಥಳ ಪರಿಶೀಲನೆಯಲ್ಲಿ ಪತ್ತೆಯಾಗಿದೆ.
ತಾಂತ್ರಿಕ ಅಧಿಕಾರಿಗಳ ಲೆಕ್ಕ ತಪಾಸಣಾ ವರದಿಯ ಪ್ರಕಾರ, 2016-17ರಿಂದ 2022-23ರ ಅವಧಿಯಲ್ಲಿ ವ್ಯಾಪಕ ಒತ್ತುವರಿ ಮಾಡಲಾಗಿದ್ದು, 2014-15, 2015-16, 2019-20 ಮತ್ತು 2024-25ನೇ ಸಾಲುಗಳಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಖನಿಜ ಸಾಗಾಣಿಕೆ ಮಾಡಿರುವುದು ಪತ್ತೆಯಾಗಿದೆ. ಇಲಾಖೆಯು ಪ್ರತಿ ವರ್ಷ ಡಿಸಿಬಿ ನೊಟೀಸ್ ನೀಡಿದ್ದರೂ ಬಾಕಿ ಪಾವತಿಸಿರಲಿಲ್ಲ. ಅಲ್ಲದೆ, ಅನುಮೋದಿತ ಕ್ಯಾರಿ ಪ್ಲಾನ್, ಪರಿಸರ ಅನುಮತಿ ಪತ್ರ ಹಾಗೂ ಡಿಜಿಎಂಎಸ್ ನಿಯಮಾವಳಿಗಳ ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿತ್ತು.
ಕಲ್ಲುಗಣಿ ಗುತ್ತಿಗೆ ರದ್ದು
ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ ಹಾಗೂ ಎಂ.ಎಂ.ಡಿ.ಆರ್. ಕಾಯ್ದೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಸಾಬೀತಾಗಿರುವುದರಿಂದ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ಸಂಖ್ಯೆ: 826ರ ಗಣಿಗಾರಿಕೆ ಚಟುವಟಿಕೆಗಳನ್ನು 2026ರ ಏಪ್ರಿಲ್ 15ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ.
ಬೆಳಗ್ಗೆ 10 ಗಂಟೆಯೊಳಗೆ ಸಿಬ್ಬಂದಿ ಹಾಜರಿರಬೇಕು, ಗುರುತಿನ ಚೀಟಿ ಕಡ್ಡಾಯ: ಚಿಕ್ಕನಾಯಕನಹಳ್ಳಿ ತಾಪಂ ಇಒ ಸೂಚನೆ
ಲೋಕಾಯುಕ್ತ ತನಿಖೆ
ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಹಾಗೂ ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿ ತನಿಖೆ ನಡೆಯುತ್ತಿದೆ. ಕಾನೂನು ಉಲ್ಲಂಘಿಸಿರುವ ವೆಂಕಟೇಶ್ವರ ಕಲ್ಲುಗಣಿ ಮಾಲಕ ಶಾಸಕ ವೆಂಕಟೇಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ಮುಖಂಡರು ಸೇರಿ ಸಾರ್ವಜನಿಕರು ಆಗ್ರಹಿಸಿದ್ದಾರೆ.