ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಗಾಂಜಾ ದಂಧೆಯ ಕಿಂಗ್‌ಪಿನ್!

Tumkur News: ಪೊಲೀಸ್ ಸಿಬ್ಬಂದಿಯ ಪುತ್ರ ಗ್ಯಾಂಗ್ ಕಟ್ಟಿಕೊಂಡು ದುಬಾರಿ 'ಹೈಡ್ರೋ ಗಾಂಜಾ' ಮಾರಾಟ ಮಾಡುತ್ತಿದ್ದ ಆಘಾತಕಾರಿ ಪ್ರಕರಣ ತುಮಕೂರು ನಗರದಲ್ಲಿ ಬೆಳಕಿಗೆ ಬಂದಿದೆ. ಪೊಲೀಸರ ನೂತನ 'ಕ್ಯೂಆರ್ ಕೋಡ್' ತಂತ್ರಜ್ಞಾನದ ರಹಸ್ಯ ಕಾರ್ಯಾಚರಣೆಯಿಂದ ಈ ಕರಾಳ ದಂಧೆ ಬಯಲಾಗಿದೆ.

ತುಮಕೂರು, ಜು.31: ಒಂದು ಕಡೆ ತಂದೆ ಸಾರ್ವಜನಿಕವಾಗಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೆ, ಮತ್ತೊಂದೆಡೆ ಅದೇ ಪೊಲೀಸ್ ಸಿಬ್ಬಂದಿಯ ಪುತ್ರ ಗ್ಯಾಂಗ್ ಕಟ್ಟಿಕೊಂಡು ದುಬಾರಿ 'ಹೈಡ್ರೋ ಗಾಂಜಾ' ಮಾರಾಟ ಮಾಡುತ್ತಿದ್ದ ಆಘಾತಕಾರಿ ಪ್ರಕರಣ ನಗರದಲ್ಲಿ (Tumkur News) ಬೆಳಕಿಗೆ ಬಂದಿದೆ. ಪೊಲೀಸರ ನೂತನ 'ಕ್ಯೂಆರ್ ಕೋಡ್' ತಂತ್ರಜ್ಞಾನದ ರಹಸ್ಯ ಕಾರ್ಯಾಚರಣೆಯಿಂದ ಈ ಕರಾಳ ದಂಧೆ ಬಯಲಾಗಿದ್ದು, ಪೊಲೀಸ್ ಸಿಬ್ಬಂದಿಯ ಪುತ್ರ ಸೇರಿದಂತೆ ಒಟ್ಟು 9 ಆರೋಪಿಗಳು ಈಗ ಜೈಲುಪಾಲಾಗಿದ್ದಾರೆ.

ಕ್ಯೂಆರ್ ಕೋಡ್ ರಹಸ್ಯ ಮತ್ತು ಕಾರ್ಯಾಚರಣೆ

ಜಿಲ್ಲಾ ಪೊಲೀಸ್ ಇಲಾಖೆ ಮಾದಕ ದ್ರವ್ಯ ಜಾಲವನ್ನು ಮಟ್ಟಹಾಕಲು ನಾವೀನ್ಯತೆಯ 'ಕ್ಯೂಆರ್ ಕೋಡ್' ಜಾಗೃತಿ ಅಭಿಯಾನವನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಯಾವುದೇ ಭಯವಿಲ್ಲದೆ ಗುಪ್ತವಾಗಿ ಮಾದಕ ದಂಧೆಯ ಮಾಹಿತಿ ನೀಡಲು ಮತ್ತು ಮಾಹಿತಿ ನೀಡಿದವರ ಗೌಪ್ಯತೆಯನ್ನು ಕಾಪಾಡಲು ಈ ವ್ಯವಸ್ಥೆ ಸಹಕಾರಿಯಾಗಿದೆ.

ಜುಲೈ 10ರಂದು ಈ ಕ್ಯೂಆರ್ ಕೋಡ್ ಮೂಲಕ ಬಂದ ಖಚಿತ ಹಾಗೂ ಗುಪ್ತ ಸುಳಿವನ್ನು ಆಧರಿಸಿ ತಿಲಕ್ ಪಾರ್ಕ್ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಅಚ್ಚರಿಯ ಸತ್ಯ ಹೊರಬಂದಿದೆ.

ಬಿಸಿಎ ವಿದ್ಯಾರ್ಥಿಯ ಕರಾಳ ದಂಧೆ

ತುಮಕೂರು ಎಸ್ಪಿ ಕಚೇರಿಯ ಹಿಂದಿನ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸವಾಗಿರುವ ಪೊಲೀಸ್ ಸಿಬ್ಬಂದಿಯೊಬ್ಬರ 21 ವರ್ಷದ ಪುತ್ರ, ಬಿಸಿಎ ವಿದ್ಯಾರ್ಥಿ ದಿಶಾಂತ್ ಮಾಸ್ಟರ್‌ಮೈಂಡ್ ಆಗಿರುವುದು ತನಿಖೆಯಿಂದ ತಿಳಿದುಬಂದಿದೆ. ಈತ ಬೆಂಗಳೂರಿನಿಂದ ವ್ಯವಸ್ಥಿತವಾಗಿ ಸಾಮಾನ್ಯ ಗಾಂಜಾ ಹಾಗೂ ಅತ್ಯಂತ ದುಬಾರಿ ಬೆಲೆಯ 'ಹೈಡ್ರೋ ಗಾಂಜಾ' ತರಿಸಿ ತುಮಕೂರಿನ ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಬಂಧಿತ ಆರೋಪಿಗಳು

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ಮೊದಲ ಹಂತದಲ್ಲಿ ದಿಶಾಂತ್ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. ದಿಶಾಂತ್ (21), ಮಂಜುನಾಥ್ (35), ಸತೀಶ್ (37), ಪ್ರಮೋದ್ (28), ದರ್ಶನ್ (31), ಅಮೋಘ್ (31).

ಚಿಕ್ಕಬಳ್ಳಾಪುರ ರೈಲು ನಿಲ್ದಾಣದ ಸಮೀಪ ಯುವಕನ ಶವ ಪತ್ತೆ; ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಶಂಕೆ

ವಶಪಡಿಸಿಕೊಂಡ ವಸ್ತುಗಳು

ಆರೋಪಿಗಳಿಂದ ಐಷಾರಾಮಿ ಫಾರ್ಚ್ಯೂನರ್ ಕಾರು ಹಾಗೂ ದೊಡ್ಡ ಪ್ರಮಾಣದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು ಮತ್ತಷ್ಟು ಸುಳಿವುಗಳನ್ನು ಕಲೆಹಾಕಿ ಇಲಾಖೆಯ ಬಲೆಗೆ ಮೂವರು ಹೊಸ ಆರೋಪಿಗಳನ್ನು ಕೆಡವಿದ್ದು, ಈವರೆಗೆ ಒಟ್ಟು 9 ಮಂದಿ ಆರೋಪಿಗಳನ್ನು ಸೆರೆಹಿಡಿಯಲಾಗಿದೆ.‌ ಈ ಕುರಿತು ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಹಾಗೂ ಈ ದಂಧೆಯಲ್ಲಿ ಭಾಗಿಯಾಗಿರುವ ಉಳಿದ ಸಂಭಾವ್ಯ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.