ಮಧುಗಿರಿ, ಅ.19: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮಾದರಿ ನೀತಿ ಸಂಹಿತೆಯು ಅ.29 ರವರೆಗೆ ಜಾರಿಯಲ್ಲಿರುವುದರಿಂದ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಸೀಲ್ದಾರ್ ಎಸ್.ಎ. ನಂದಿನಿ ತಿಳಿಸಿದರು. ಪಟ್ಟಣದ (Madhugiri News) ಶಿರಾಗೇಟ್ ಸಮೀಪವಿರುವ ತಾಲೂಕು ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ನಾಯಕ ಸಮುದಾಯದ ಮುಖಂಡರು, ಅಧಿಕಾರಿಗಳು, ಇತರೆ ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಕಚೇರಿಯಲ್ಲಿ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ವಿಶೇಷ ಭಾಷಣಕಾರರು ಮಾತನಾಡಲು ಅವಕಾಶ ನೀಡಲಾಗುವುದು ಆದ್ದರಿಂದ ಸಮುದಾಯದ ಮುಖಂಡರು ಭಾಷಣಕಾರರ ಹೆಸರನ್ನು ಸೂಚಿಸುವಂತೆ ಸಭೆಯಲ್ಲಿ ತಿಳಿಸಿದರು.
ತಾಲೂಕು ನಾಯಕ ಸಮುದಾಯದ ಅಧ್ಯಕ್ಷ ಜಿ.ಎಸ್. ಜಗದೀಶ್ ಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವು ಮಾದರಿ ನೀತಿ ಸಂಹಿತೆ ಹಾಗೂ ಬರಗಾಲ ಇರುವುದರಿಂದ ಸರಳವಾಗಿ ಆಚರಿಸಲಾಗುವುದು. ಅಂದೂ ಸಹ ನಮ್ಮ ಸಮುದಾಯದವರು ಸರ್ಕಾರದ ಮಟ್ಟದಲ್ಲಿ ಸರಳವಾಗಿ ಆಚರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ನಂತರ ಮುಂದಿನ ದಿನಗಳಲ್ಲಿ ತಾಲೂಕಿನ ಸಮುದಾಯದ ಮುಖಂಡರು, ಗಣ್ಯರೊಂದಿಗೆ ಸೇರಿ ಮತ್ತೊಮ್ಮೆ ಸಭೆ ಕರೆದು ಅಭಿಪ್ರಾಯ, ಸಲಹೆ ಸೂಚನೆಗಳನ್ನು ಪಡೆದು ಆದ್ದೂರಿಯಾಗಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ತುಮಕೂರು ನಗರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯವಾಗದಂತೆ ಕ್ರಮ: ಶಾಸಕ ಜಿ.ಬಿ. ಜ್ಯೋತಿಗಣೇಶ್
ಸಭೆಯಲ್ಲಿ ತಾಲೂಕು ನಾಯಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರನಾರಾಯಣ, ಜಿಲ್ಲಾ ವಾಲ್ಮೀಕಿ ಸಂಘದ ನಿರ್ದೇಶಕಿ ಚಂದ್ರಮ್ಮ,ಸಮುದಾಯದ ಮುಖಂಡರುಗಳಾದ ಸಾಮಿಲ್ ಆಂಜಿನಪ್ಪ, ಕೃಷ್ಣ ನಾಯಕ್, ಲಕ್ಷ್ಮೀ ನಾರಾಯಣ್, ರಾಜೇಂದ್ರ ಎಂ.ಎನ್., ಗಂಗರಾಜು, ಟಿವಿಎಸ್ ಮಂಜು, ಕಿಶೋರ್, ಪಿ.ಕೆ. ರಂಗಶ್ಯಾಮಯ್ಯ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.