ತುಮಕೂರು, ಏ.1: ಸಿದ್ದಗಂಗಾ ಮಠದಲ್ಲಿ ಹಮ್ಮಿಕೊಂಡಿದ್ದ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮವರ್ಧಂತಿ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಭಾಗವಹಿಸಿದ್ದರು. ಆದರೆ, ವೇದಿಕೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ನೆಪದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರಿಗೆ ವೇದಿಕೆಯ ಕೊನೆಯಲ್ಲಿ ಆಸನ ವ್ಯವಸ್ಥೆ ಮಾಡಿರುವುದಕ್ಕೆ ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ.
ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಜತೆಯಲ್ಲಿಯೇ ಕುಳಿತಿದ್ದರು. ಆದರೆ ಈಗ ಶಿಷ್ಟಾಚಾರ ನೆಪದಲ್ಲಿ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಕೊನೆಯ ಆಸನ ನೀಡಿದ್ದು ಏಕೆ? ಎಂದು ಭಕ್ತರು ಪ್ರಶ್ನೆ ಮಾಡಿದ್ದಾರೆ.
ಏನಿದು ಘಟನೆ?
ಸಿದ್ದಗಂಗಾ ಮಠದಲ್ಲಿ ನಡೆದ ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮವರ್ಧಂತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಆಸನ ವ್ಯವಸ್ಥೆಯ ಶಿಷ್ಟಾಚಾರ ಪಾಲನೆಗೆ ಸಂಬಂಧಿಸಿದಂತೆ ತೀವ್ರ ಗೊಂದಲ ಉಂಟಾಯಿತು. ಸುಮಾರು ಹತ್ತು ನಿಮಿಷಗಳ ಕಾಲ ನಡೆದ ಈ ಹಗ್ಗಜಗ್ಗಾಟದಿಂದಾಗಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಯವರು ವೇದಿಕೆಯ ಕೊನೆಯಲ್ಲಿ ಕುಳಿತುಕೊಳ್ಳಬೇಕಾದ ಪ್ರಸಂಗ ಎದುರಾಯಿತು.
ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮವಾಗಿದ್ದರಿಂದ ಭದ್ರತಾ ಸಿಬ್ಬಂದಿ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದ್ದರು. ಈ ವೇಳೆ ವೇದಿಕೆಯ ಮೇಲೆ ಗಣ್ಯರು ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿಯಾಯಿತು. ನಿಯಮದಂತೆ ರಾಷ್ಟ್ರಪತಿಗಳ ಪಕ್ಕದಲ್ಲಿ ಸಿದ್ದಲಿಂಗ ಸ್ವಾಮೀಜಿಯವರು ಕುಳಿತುಕೊಳ್ಳಲು ಅವಕಾಶ ನೀಡಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಪ್ರಲ್ಹಾದ್ ಜೋಶಿ ಅವರು ಭದ್ರತಾ ಸಿಬ್ಬಂದಿಯ ಬಳಿ ಮನವಿ ಮಾಡಿಕೊಂಡರು.
ಆದರೆ, ರಾಷ್ಟ್ರಪತಿಗಳ ಭದ್ರತಾ ಸಿಬ್ಬಂದಿ ಈ ಮನವಿಗೆ ಒಪ್ಪಲಿಲ್ಲ. ಶಿಷ್ಟಾಚಾರದ ಪಟ್ಟಿಯ ಪ್ರಕಾರವೇ ಆಸನಗಳನ್ನು ಕಲ್ಪಿಸಬೇಕು ಎಂದು ಪಟ್ಟು ಹಿಡಿದರು. ಕೇಂದ್ರ ಸಚಿವರು ಎಷ್ಟೇ ಪ್ರಯತ್ನಿಸಿದರೂ ಭದ್ರತಾ ಸಿಬ್ಬಂದಿ ಮಾತ್ರ ತಮ್ಮ ಪಟ್ಟು ಸಡಿಲಿಸಲಿಲ್ಲ. ಇದರಿಂದಾಗಿ ವೇದಿಕೆಯ ಮೇಲೆ ಕೆಲಕಾಲ ಅಸಮಾಧಾನ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಅಂತಿಮವಾಗಿ ಶಿಷ್ಟಾಚಾರದ ಪಟ್ಟಿಯಂತೆ ರಾಷ್ಟ್ರಪತಿಗಳ ಪಕ್ಕದಲ್ಲಿ ರಾಜ್ಯಪಾಲರು ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಸೋಮಣ್ಣ ಅವರಿಗೆ ಆಸನ ಕಲ್ಪಿಸಲಾಯಿತು. ನಂತರದ ಸಾಲಿನಲ್ಲಿ ರಾಜ್ಯದ ಸಚಿವರಾದ ಜಿ. ಪರಮೇಶ್ವರ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಎಂ.ಬಿ. ಪಾಟೀಲ್ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಲಾಯಿತು. ಭದ್ರತಾ ನಿಯಮಗಳ ಅನ್ವಯ, ಮಠದ ಆತಿಥೇಯರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರಿಗೆ ವೇದಿಕೆಯ ಕೊನೆಯಲ್ಲಿ ಆಸನ ಮೀಸಲಿಡಲಾಗಿತ್ತು.
LPG Crisis: ಇಂಧನ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸಿ: ಸಿದ್ದಲಿಂಗ ಸ್ವಾಮೀಜಿ ಸಲಹೆ
ಈ ಎಲ್ಲಾ ಗೊಂದಲಗಳು ಬಗೆಹರಿದು, ಆಸನಗಳ ವ್ಯವಸ್ಥೆ ಅಂತಿಮಗೊಂಡ ಬಳಿಕವಷ್ಟೇ ರಾಷ್ಟ್ರಪತಿಗಳು ವೇದಿಕೆಗೆ ಆಗಮಿಸಿದರು. ಮಠದ ಆವರಣದಲ್ಲಿ ನಡೆದ ಈ ಹಠಾತ್ ಬೆಳವಣಿಗೆಯಿಂದಾಗಿ ಭಕ್ತರು ಹಾಗೂ ಮಠದ ಅಭಿಮಾನಿಗಳಲ್ಲಿ ಸ್ವಲ್ಪ ಮಟ್ಟಿನ ಬೇಸರ ವ್ಯಕ್ತವಾಯಿತು. ಸುಮಾರು ಹತ್ತು ನಿಮಿಷಗಳ ಕಾಲ ನಡೆದ ಶಿಷ್ಟಾಚಾರದ ಗದ್ದಲವು ಕಾರ್ಯಕ್ರಮದ ವಿಳಂಬಕ್ಕೆ ಕಾರಣವಾಯಿತು.