ಬೆಂಗಳೂರು, ನ. 14: ಪದ್ಮಶ್ರೀ ಪುರಸ್ಕೃತೆ, ಖ್ಯಾತ ಪರಿಸರವಾದಿ ಸಾಲುಮರದ ತಿಮ್ಮಕ್ಕ (Saalumarada Thimmakka) ಇನ್ನಿಲ್ಲ. ಅವರಿಗೆ 114 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ವೃಕ್ಷಮಾತೆ ಎಂದೇ ಖ್ಯಾತಿ ಪಡೆದ ಅವರು ರಸ್ತೆ ಬದಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾಲು ಗಿಡಗಳನ್ನು ನೆಡುವ ಮೂಲಕ ಪರಿಸರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಪರಿಸರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ 2019ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. 1911ರ ಜೂನ್ 30ರಂದು ಅವರು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದರು.
ರಸ್ತೆ ಬದಿ ನೆಟ್ಟ ಗಿಡಗಳಿಂದಲೇ ಸಾಲುಮರದ ತಿಮ್ಮಕ್ಕೆ ಎಂದೇ ಕರೆಸಿಕೊಳ್ಳುತ್ತಿದ್ದ ತಿಮ್ಮಕ್ಕ ಅವರನ್ನು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಗೌರವಿಸಿವೆ. ರಾಮನಗರದ ಹುಲಿಕಲ್ ಮತ್ತು ಕುದೂರು ನಡುವಿನ ಹೆದ್ದಾರಿಯ ಸುಮಾರು 45 ಕಿ.ಮೀ. ಉದ್ದಕ್ಕೂ ತಮ್ಮ ಪತಿ ಚಿಕ್ಕಯ್ಯ ಅವರೊಂದಿಗೆ 385ಕ್ಕೂ ಹೆಚ್ಚು ಆಲದ ಮರ ನೆಟ್ಟಿದ್ದಾರೆ. ಜತೆಗೆ ಇತರ ಸುಮಾರು 8 ಸಾವಿರ ಗಿಡ ಪೋಷಿಸಿದ್ದಾರೆ. ಯಾವುದೇ ಶಿಕ್ಷಣ ಪಡೆಯದ ಅವರು ಆರಂಭದಲ್ಲಿ ಕ್ವಾರೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾನಿಲಯ 2020ರಲ್ಲಿ ತಿಮ್ಮಕ್ಕ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಮಕ್ಕಳಿಲ್ಲದ ತಿಮ್ಮಕ್ಕ ಅವರು ಉಮೇಶ್ ಎಂಬ ಸಾಕು ಮಗನನ್ನು ಅಗಲಿದ್ದಾರೆ.
ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಎಕ್ಸ್ ಪೋಸ್ಟ್:
ಮರಗಳೇ ಮಕ್ಕಳು
ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗೆ ಹಲವು ವರ್ಷಗಳ ಕಾಲ ಮಕ್ಕಳಿರಲಿಲ್ಲ. ಈ ಬಗ್ಗೆ ಕೊರಗುತ್ತ ಕುಳಿತುಕೊಳ್ಳದ ಅವರು ಗಿಡಗಳನ್ನು ನಡೆದುವ ಮೂಲಕ ಅದರಲ್ಲೇ ತಮ್ಮ ಮಕ್ಕಳನ್ನು ಕಾಣ ತೊಡಗಿದರು. ತಿಮ್ಮಕ್ಕ ಮಕ್ಕಳಿಲ್ಲದ ದುಃಖವನ್ನು ಮರೆಯಲು ರಸ್ತೆಯ ಬದಿಗಳಲ್ಲಿ ಆಲದ ಸಸಿಗಳನ್ನು ನೆಡಲು ಆರಂಭಿಸಿದರು. 1994 ಕುದೂರಿನಿಂದ ಹುಲಿಕಲ್ ತನಕ ಇರುವ ರಾಜ್ಯ ಹೆದ್ದಾರಿ ತಿಮ್ಮಕ್ಕ ಆಲದ ಸಸಿಗಳನ್ನು ನೆಟ್ಟರು. ಮುಂದೆ ಈ ಪ್ರವೃತ್ತಿ ಬೆಳೆಯುತ್ತ ಹೋಯಿತು.
ತೀರಾ ಬಡತದಲ್ಲಿ ಜೀವನ ದೂಡುತ್ತಿದ್ದ ತಿಮ್ಮಕ್ಕ ದಂಪತಿ ಎಷ್ಟೇ ಕಷ್ಟ ಇದ್ದರೂ ತಮ್ಮ ಪರಿಸರ ಸ್ನೇಹಿ ಕ್ರಮವನ್ನು ಕೈ ಬಿಡಲಿಲ್ಲ. ಗಂಡ-ಹೆಂಡತಿ 4 ಕಿ.ಮೀ.ವರೆಗೆ ಬಿಂದಿಗೆ ನೀರನ್ನು ಹೊತ್ತು ಕೊಂಡೊಯ್ಯುತ್ತಿದ್ದರು. ಸಸಿಗಳ ಸುತ್ತ ಮುಳ್ಳು ಪೊದೆಗಳನ್ನು ಹೊದಿಸುತ್ತಿದ್ದರು. ನೀರಿನ ಅಭಾವ ಉಂಟಾಗಿ ಗಿಡಗಳಿಗೆ ತೊಂದರೆಯಾಗುತ್ತದೆ ಎಂದು ಅನಿಸಿದಾಗ ಮತ್ತೆ ಹೆಚ್ಚಾಗಿ ಮುಂಗಾರು ಮಳೆಯ ಕಾಲದಲ್ಲಿ ಗಿಡವನ್ನು ನೆಡಲು ಶುರು ಮಾಡಿದ್ದರು. ಸದ್ಯ ಮರಗಳ ನಿರ್ವಹಣೆಯನ್ನು ಈಗ ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ.
ಈ ಸುದ್ದಿಯನ್ನೂ ಓದಿ: Saalumarada Thimmakka: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನ
ತಿಮ್ಮಕ್ಕ ಅವರಿಗೆ ಸಂದ ಪ್ರತಿಷ್ಠಿತ ಗೌರವ
- ಪದ್ಮಶ್ರೀ ಪ್ರಶಸ್ತಿ - 2019
- ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ - 2010
- ರಾಷ್ಟ್ರೀಯ ನಾಗರಿಕ ಪ್ರಶಸ್ತಿ - 1995
- ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಗಳು - 1997
- ವೀರಚಕ್ರ ಪ್ರಶಸ್ತಿ - 1997
- ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಗೌರವ ಪ್ರಮಾಣಪತ್ರ
- ಬೆಂಗಳೂರಿನ ಭಾರತೀಯ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆಯಿಂದ ಮೆಚ್ಚುಗೆಯ ಪ್ರಮಾಣಪತ್ರ.
- ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ - 2000
- ಗಾಡ್ಫ್ರೇ ಫಿಲಿಪ್ಸ್ ಶೌರ್ಯ ಪ್ರಶಸ್ತಿ - 2006
- ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ
- ಹೂವಿನಹೊಳೆ ಪ್ರತಿಷ್ಠಾನದಿಂದ ವಿಶ್ವಾತ್ಮ ಪ್ರಶಸ್ತಿ -2015
- ಬಿಬಿಸಿಯ 100 ಮಹಿಳೆಯರ ಪಟ್ಟಯಲ್ಲಿ ಸ್ಥಾನ - 2016