ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ: ಶ್ರೀ ಮಧುಸೂಧನ್ ಸಾಯಿ

Sadguru Sri Madhusudan Sai: ಶಿರಾ ತಾಲೂಕಿನ ಗಾಣದ ಹುಣಸೆಯಲ್ಲಿರುವ ಸತ್ಯ ಸಾಯಿ ಕಾರುಣ್ಯನಿಕೇತನದ ಗುರುಕುಲದ ಶಿಕ್ಷಣವನ್ನು ಪಿಯುಸಿವರೆಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂಧನ್ ಸಾಯಿ ತಿಳಿಸಿದ್ದಾರೆ.

ಸದ್ಗುರು ಶ್ರೀ ಮಧುಸೂದನ ಸಾಯಿ.

ತುಮಕೂರು, ಆ.28: ಶಿರಾ ತಾಲೂಕಿನ ಗಾಣದ ಹುಣಸೆಯಲ್ಲಿರುವ ಸತ್ಯ ಸಾಯಿ ಕಾರುಣ್ಯನಿಕೇತನದ ಗುರುಕುಲದ ಶಿಕ್ಷಣವನ್ನು ಪಿಯುಸಿವರೆಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್‌ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂಧನ್ ಸಾಯಿ (Sadguru Sri Madhusudan Sai) ತಿಳಿಸಿದರು. ನಗರದಲ್ಲಿ ನಡೆದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂಧನ್ ಸಾಯಿ ಅವರು ಪ್ರಮುಖ ಘೋಷಣೆಗಳನ್ನು ಮಾಡಿದರು.

ವಸತಿ ಸಹಿತ ಉಚಿತ ಶಿಕ್ಷಣ ವಿಸ್ತರಣೆ: ಶಿರಾ ತಾಲೂಕಿನಲ್ಲಿರುವ ಸಂಸ್ಥೆಯ ಶಿಕ್ಷಣ ಹಾಗೂ ವಸತಿ ಸೌಲಭ್ಯವನ್ನು ಪಿಯುಸಿ ಹಂತಕ್ಕೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸದ್ಗುರುಗಳು ಸ್ಪಷ್ಟಪಡಿಸಿದರು.

ಆರೋಗ್ಯ ವಲಯಕ್ಕೆ ಒತ್ತು: ನಗರ ಪ್ರದೇಶಗಳಲ್ಲಿ ದೊಡ್ಡ ಆಸ್ಪತ್ರೆಗಳನ್ನು ಕಟ್ಟುವುಕ್ಕಿಂತ ಗ್ರಾಮೀಣ ಭಾಗಗಳಲ್ಲಿ ಸುಸಜ್ಜಿತ ತುರ್ತು ಆರೈಕೆ ಕೇಂದ್ರಗಳನ್ನು ಆರಂಭಿಸುವ ಚಿಂತನೆ ಇದೆ. ಈಗಾಗಲೇ ಮಧುಗಿರಿ ಸಮೀಪ ಇಂತಹ ಕೇಂದ್ರ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸುವುದಾಗಿ ಘೋಷಿಸಿದರು. ಮುದ್ದೇನಹಳ್ಳಿಯಲ್ಲಿ ಬಿಲ್ ಕೌಂಟರ್ ಇಲ್ಲದ ರಾಜ್ಯದ ಏಕೈಕ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಮಕ್ಕಳೇ ದೇಶದ ಭವಿಷ್ಯ: "ಮಕ್ಕಳ ಮೇಲೆ ಮಾಡುವುದು ಖರ್ಚಲ್ಲ, ದೇಶದ ಭವಿಷ್ಯಕ್ಕಾಗಿ ಮಾಡುವ ಹೂಡಿಕೆ. ಪ್ರತಿಯೊಂದು ಮಗುವೂ ಕೇವಲ ಕುಟುಂಬದ ಜವಾಬ್ದಾರಿಯಲ್ಲ, ಬದಲಿಗೆ ಇಡೀ ಸಮಾಜ ಮತ್ತು ದೇಶದ ಜವಾಬ್ದಾರಿ" ಎಂದು ಸಂವಾದದಲ್ಲಿ ನಟ ಅನಿರುದ್ಧ್ ಜತ್ಕರ್ ಅವರ ಪ್ರಶ್ನೆಗೆ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಸದ್ಗುರು ಶ್ರೀ ಮಧುಸೂಧನ್ ಸಾಯಿ ಅವರು ಭಾರತದ ಶ್ರೇಷ್ಠ ಸಂತ ಎಂದು ಶ್ಲಾಘಿಸಿದರು.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹಾಗೂ ದೆಹಲಿಯಲ್ಲಿರುವ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಉಪಸ್ಥಿತರಿದ್ದು ಸಂಸ್ಥೆಯ ಜನಪರ ಸೇವಾ ಕಾರ್ಯಗಳನ್ನು ಕೊಂಡಾಡಿದರು.

ನಮ್ಮ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್ ಕೌಂಟರ್‌ಗಳಿಲ್ಲ, ಅನ್ನ, ಅಕ್ಷರ, ಆರೋಗ್ಯ ವಾಣಿಜ್ಯಕ್ಕೆ ಬಳಕೆಯಾಗದಿರಲಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಸಂವಾದವನ್ನು ನಟ ಅನಿರುದ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿಗಣೇಶ್, ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ, ವಿಶ್ರಾಂತ ಕುಲಪತಿಗಳಾದ ರಾಜಾಸಾಬ್, ವೆಂಕಟೇಶ್ವರಲು, ಮಾಜಿ ವಿಪ ಸದಸ್ಯ ಹುಲಿನಾಯ್ಕರ್, ಉದ್ಯಮಿ ಮಂಜುನಾಥ್ ರೆಡ್ಡಿ, ಮುಖಂಡ ಗೋವಿಂದ ರೆಡ್ಡಿ, ನೇತಾಜಿ ಶ್ರೀಧರ್, ನಿರಂಜನ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.