ತುಮಕೂರು: ಕಾನೂನು ಪಾಲಿಸಬೇಕಾದ ಪೊಲೀಸ್ ಸಿಬ್ಬಂದಿಯೊಬ್ಬರ ಪುತ್ರನೇ ಅಕ್ರಮವಾಗಿ ಗಾಂಜಾ (Ganja) ಕೃಷಿ ನಡೆಸಿ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಗುಡ್ಡದಹಳ್ಳಿ ಹಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಹಿತೇಂದ್ರ (28) ಬಂಧಿತ ಆರೋಪಿಯಾಗಿದ್ದು, ಈತನ ತಂದೆ ನಗರದ ಪೊಲೀಸ್ ಠಾಣೆಯೊಂದರಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಘಟನೆಯ ವಿವರ:
ಮಾದಕ ವಸ್ತುಗಳ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರ ಮನೆಯಲ್ಲೇ ಇಂತಹ ಕೃತ್ಯ ನಡೆದಿರುವುದು ಇಲಾಖೆಗೆ ಮುಜುಗರ ತಂದಿದೆ.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಚೇಳೂರು ಪೊಲೀಸರು, ತೋಟದ ಮಧ್ಯೆ ಯಾರಿಗೂ ಅನುಮಾನ ಬಾರದಂತೆ ರಹಸ್ಯವಾಗಿ ಗೊಬ್ಬರ ಹಾಕಿ ಸೊಗಸಾಗಿ ಬೆಳೆಸಿದ್ದ 8.2 ಅಡಿ ಎತ್ತರದ ಗಾಂಜಾ ಗಿಡವನ್ನು ಪತ್ತೆ ಮಾಡಿದ್ದಾರೆ.
ದಾಳಿ ವೇಳೆ ಬರೋಬ್ಬರಿ 950 ಗ್ರಾಂಗಳಷ್ಟು ತೂಕವಿದ್ದ ಗಾಂಜಾ ಗಿಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸಪ್ಪನ ಮಗನೇ ಈ ಕೃತ್ಯದಲ್ಲಿ ತೊಡಗಿರುವುದನ್ನು ಕಂಡು ಸ್ಥಳೀಯ ಗ್ರಾಮಸ್ಥರು ಮತ್ತು ಸಾರ್ವಜನಿಕರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
Chikkamagaluru Murder: ಕುಡಿದ ಮತ್ತಿನಲ್ಲಿ ತಂದೆಯನ್ನೇ ಕೊಚ್ಚಿ ಕೊಂದ ಮಗ
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಹಿತೇಂದ್ರನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.