ತುಮಕೂರು, ಅ.21: ತಮ್ಮ ಅಪೂರ್ವವಾದ ಚಿಂತನೆ ಹಾಗೂ ಅತ್ಯಂತ ವೈಜ್ಞಾನಿಕವಾದ ಸಿದ್ಧಾಂತದ ಮೂಲಕ ವೇದಾಂತ ಕ್ಷೇತ್ರದಲ್ಲಿ ಕನ್ನಡ ನಾಡಿನ ಹಿರಿಮೆಯನ್ನು ಎತ್ತಿಹಿಡಿದವರು ಶ್ರೀಮಧ್ವಾಚಾರ್ಯರು ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ನಗರದ (Tumkur News) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಅಖಿಲ ಭಾರತ ಮಾಧ್ವ ಮಂಡಳ (ತುಮಕೂರು ಶಾಖೆ) ಹಾಗೂ ಸಮಸ್ತ ಮಾಧ್ವ ಬಂಧುಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ‘ಶ್ರೀ ಮಧ್ವಾಚಾರ್ಯರ ಜಯಂತಿʼ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ತಮ್ಮ ಅಸದೃಶವಾದ ಭಕ್ತಿ, ತಪಸ್ಸು ಹಾಗೂ ಅನುಪಮ ಹರಿಭಕ್ತಿಯಿಂದ ವೇದಾಂತ ಚಿಂತನ ಕ್ರಮಕ್ಕೆ ಆಚಾರ್ಯರು ಹೊಸ ಶಿಸ್ತು ಮತ್ತು ದೃಷ್ಟಿಕೋನವನ್ನು ನೀಡಿದರು. ಬಾಲ್ಯದಿಂದಲೇ ತಮ್ಮ ಅಲೌಕಿಕ ಪ್ರತಿಭೆಯನ್ನು ಪ್ರದರ್ಶಿಸಿದ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸಾಶ್ರಮ ಸ್ವೀಕರಿಸಿದರು. ಭಾರತಾದ್ಯಂತ ಸಂಚರಿಸಿ, ಪ್ರಚಲಿತದಲ್ಲಿದ್ದ ಸಿದ್ಧಾಂತಗಳಲ್ಲಿದ್ದ ದೋಷಗಳನ್ನು ಎತ್ತಿ ತೋರಿಸಿದ ಅವರು, ಅಂದಿನ ವಿದ್ವಾಂಸರನ್ನು ನಿರುತ್ತರಗೊಳಿಸಿ ಇಂದಿನ ಪ್ರಸಿದ್ಧ ‘ತತ್ತ್ವವಾದ’ವನ್ನು ಪುನಃ ಪ್ರತಿಷ್ಠಾಪಿಸಿದರು ಎಂದು ತಿಳಿಸಿದರು.
ವೇದಗಳು, ಬ್ರಹ್ಮಸೂತ್ರಗಳು, ಉಪನಿಷತ್ತುಗಳು, ಭಗವದ್ಗೀತೆ, ಪುರಾಣಗಳು ಹಾಗೂ ಇತಿಹಾಸ ಗ್ರಂಥಗಳು ಸೇರಿದಂತೆ ವೇದಾಂತದ ಯಾವುದೇ ಭಾಗವನ್ನೂ ಬಿಡದೆ ಸಮಗ್ರವಾಗಿ ಅರ್ಥವಿಶ್ಲೇಷಣೆ ಮಾಡಿದ ಏಕಮಾತ್ರ ಆಚಾರ್ಯರು ಶ್ರೀಮಧ್ವಾಚಾರ್ಯರು ಎಂದು ಅವರು ಬಣ್ಣಿಸಿದರು.
ಹತ್ತು ಉಪನಿಷತ್ತುಗಳಿಗೆ ಭಾಷ್ಯ, ಬ್ರಹ್ಮಸೂತ್ರಭಾಷ್ಯ, ನ್ಯಾಯವಿವರಣ, ಅನುವ್ಯಾಖ್ಯಾನ, ಅಣುಭಾಷ್ಯ, ವೇದಭಾಷ್ಯ, ವಿಷ್ಣುತತ್ತ್ವ ನಿರ್ಣಯ, ಖಂಡನತ್ರಯ, ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ, ಭಾಗವತ ತಾತ್ಪರ್ಯ ನಿರ್ಣಯ, ಶ್ರೀಕೃಷ್ಣಾಮೃತ ಮಹಾರ್ಣವ, ತಂತ್ರಸಾರ ಸಂಗ್ರಹ, ಸದಾಚಾರ ಸ್ಮೃತಿ, ತಿಥಿ ನಿರ್ಣಯ ಮುಂತಾದ 'ಸರ್ವಮೂಲ ಗ್ರಂಥ'ಗಳನ್ನು ಹಾಗೂ ಹರಿದಾಸ ಪರಂಪರೆಗೆ ಸ್ಪೂರ್ತಿಯಾದ 'ದ್ವಾದಶ ಸ್ತೋತ್ರ'ಗಳನ್ನು ಅವರು ರಚಿಸಿದ್ದಾರೆ ಎಂದು ಹೇಳಿದರು.
ಅಷ್ಟಮಠಗಳ ಸ್ಥಾಪನೆ
ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹ ಪ್ರತಿಷ್ಠಾಪನೆ ಮಾಡಿ, ಪೂಜಾ ಕಾರ್ಯಗಳಿಗಾಗಿ ಎಂಟು ಮಠಗಳನ್ನು (ಅಷ್ಟಮಠಗಳು) ಸ್ಥಾಪಿಸಿದರು. ಜತೆಗೆ ಧರ್ಮ ಪ್ರಚಾರಕ್ಕಾಗಿ ಶಿಷ್ಯರಾದ ಶ್ರೀಪದ್ಮನಾಭತೀರ್ಥರ ನೇತೃತ್ವದಲ್ಲಿ ಘಟ್ಟದ ಮೇಲಿನ ಮಠಗಳನ್ನು ಸ್ಥಾಪಿಸಿದರು ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ್ ಕು. ಮಿರ್ಜಿ, ಡಿ. ವಿ. ಸುರೇಶಕುಮಾರ್, ಅಖಿಲ ಭಾರತ ಮಾಧ್ವ ಮಹಾಮಂಡಳದ ಅಧ್ಯಕ್ಷರಾದ ಜಿ. ಕೆ. ಶ್ರೀನಿವಾಸ್, ಕಾರ್ಯದರ್ಶಿ ಗುರುಪ್ರಸಾದ್, ವಿ. ಆನಂದಾಚಾರ್ಯ ಹಾಗೂ ಮಾಧ್ವ ಸಮಾಜದ ಮುಖಂಡರು ಭಾಗವಹಿಸಿದ್ದರು.