ತುಮಕೂರು, ಜು.22: ನವಜಾತ ಶಿಶುಗಳಲ್ಲಿ ಎದುರಾಗುವ ಕರುಳಿನ ಅಡಚಣೆಯಂತಹ ಅತ್ಯಂತ ಅಪರೂಪದ ಹಾಗೂ ಮಾರಣಾಂತಿಕ ಕಾಯಿಲೆಯನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ತುರ್ತು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ನಗರದ (Tumkur News) ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ವೈದ್ಯರ ತಂಡವು ಮಗುವಿಗೆ ಮರುಜೀವ ನೀಡಿದೆ.
ಕಾಯಿಲೆಯ ಗಂಭೀರತೆ ಮತ್ತು ಸವಾಲು
ಜಿಲ್ಲೆಯ ಗುಬ್ಬಿ ತಾಲೂಕಿನ ನವಜಾತ ಶಿಶುವೊಂದಕ್ಕೆ ಜನನದ 18 ಗಂಟೆಯಲ್ಲೇ ಪಿತ್ತರಸದ ಆಸ್ಪಿರೇಟ್‌ಗಳು ಮತ್ತು ಹೊಟ್ಟೆ ಉಬ್ಬುವಿಕೆ ಕಾಣಿಸಿಕೊಂಡಿತ್ತು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಯ ಬಳಿಕ ಮಗುವನ್ನು ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಪರೀಕ್ಷೆ ನಡೆಸಿದಾಗ ಮಗುವಿಗೆ ಸುಮಾರು 2,000 ಜೀವಂತ ಜನನಗಳಲ್ಲಿ ಓರ್ವರಲ್ಲಿ ಮಾತ್ರ ಕಂಡುಬರುವ ಅಪರೂಪದ 'ಹಿರ್ಶಸ್ಪ್ರಂಗ್' ಕಾಯಿಲೆ ಇರುವುದು ದೃಢಪಟ್ಟಿತು. ಈ ಸಮಸ್ಯೆಯಿಂದ ಕರುಳು ಸಂಪೂರ್ಣ ಅಥವಾ ಭಾಗಶಃ ಮುಚ್ಚಿಕೊಂಡು, ಹಾಲು, ದ್ರವ ಹಾಗೂ ಗಾಳಿ ಸರಿಯಾಗಿ ದೇಹದೊಳಗೆ ಸಾಗದೆ ಪ್ರಾಣಾಪಾಯ ಉಂಟಾಗುತ್ತದೆ.
ಯಶಸ್ವಿ ಶಸ್ತ್ರಚಿಕಿತ್ಸೆ ಮತ್ತು ಆರೈಕೆ
ಮಗುವಿನ ಪೋಷಕರು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೂ, ಸಿದ್ದಾರ್ಥ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುಬ್ರಮಣ್ಯ ನೇತೃತ್ವದ ತಜ್ಞ ವೈದ್ಯರ ತಂಡವು ಸಕಾಲಿಕ ಸ್ಪಂದನೆ ನೀಡಿ ತುರ್ತು ಶಸ್ತ್ರಚಿಕಿತ್ಸೆ ನೆರವೇರಿಸಿತು.
ಶಸ್ತ್ರಚಿಕಿತ್ಸೆ ಮತ್ತು ಅಗತ್ಯ ವೈದ್ಯಕೀಯ ಆರೈಕೆಯ ಬಳಿಕ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಒಂದು ವಾರದ ನಂತರ ಆರೋಗ್ಯಕರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
Vijayanagara News: ಹೊಸಪೇಟೆಯಲ್ಲಿ ವಿಜಯಶ್ರೀ ಚೈಲ್ಡ್ ಕೇರ್ ಆಸ್ಪತ್ರೆ ಉದ್ಘಾಟನೆ
ವೈದ್ಯರ ಸಲಹೆ ಮತ್ತು ಪೋಷಕರ ಕೃತಜ್ಞತೆ
ಉಪಪ್ರಾಂಶುಪಾಲ ಡಾ. ಜಿ.ಎನ್. ಪ್ರಭಾಕರ್ ಹಾಗೂ ವೈದ್ಯರ ತಂಡದ ಸಕಾಲಿಕ ಚಿಕಿತ್ಸೆಯಿಂದ ತಮ್ಮ ಕರುಳಿನ ಕುಡಿಗೆ ಮರುಜೀವ ಸಿಕ್ಕಿದೆ ಎಂದು ಮಗುವಿನ ಪೋಷಕರು ಆಸ್ಪತ್ರೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
![]()
ʼನವಜಾತ ಮಕ್ಕಳಲ್ಲಿ ಹೊಟ್ಟೆ ಉಬ್ಬುವುದು, ಮಲ-ಮೂತ್ರ ಆಗದಿರುವುದು ಹಾಗೂ ಹಸಿರು ಬಣ್ಣದ ವಾಂತಿ ಮಾಡಿಕೊಳ್ಳುವುದು ಈ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಇಂತಹ ಸಮಯದಲ್ಲಿ ನಿರ್ಲಕ್ಷ್ಯ ಮಾಡದೆ ತಕ್ಷಣವೇ ವೈದ್ಯರ ನೆರವು ಪಡೆಯಬೇಕು.ʼ
-ಡಾ. ಸುಬ್ರಮಣ್ಯ, ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರು