ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಂಸ್ಕೃತಿಗೆ ಭದ್ರ ಬುನಾದಿ ಹಾಕಿದವರು ದೇವರ ದಾಸಿಮಯ್ಯ: ತಹಸೀಲ್ದಾರ್ ಮಮತಾ

Chikkanayakanahalli News: ಭಾರತೀಯ ಸಂಸ್ಕೃತಿಗೆ ಭದ್ರ ಬುನಾದಿ ಹಾಕಿದವರು ಹಾಗೂ ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಶ್ರೇಷ್ಠ ಮೌಲ್ಯಗಳನ್ನು ನೀಡಿದವರು ಆದ್ಯ ವಚನಕಾರ ದೇವರ ದಾಸಿಮಯ್ಯನವರು ಎಂದು ತಹಸೀಲ್ದಾರ್ ಮಮತಾ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಚಿಕ್ಕನಾಯನಕಹಳ್ಳಿ ತಾಲೂಕು ಕಚೇರಿಯಲ್ಲಿ 'ದೇವರ ದಾಸಿಮಯ್ಯ ಜಯಂತಿ' ನಡೆಯಿತು.

ಚಿಕ್ಕನಾಯಕನಹಳ್ಳಿ‌, ಮಾ.23: ಭಾರತೀಯ ಸಂಸ್ಕೃತಿಗೆ ಭದ್ರ ಬುನಾದಿ ಹಾಕಿದವರು ಹಾಗೂ ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಶ್ರೇಷ್ಠ ಮೌಲ್ಯಗಳನ್ನು ನೀಡಿದವರು ಆದ್ಯ ವಚನಕಾರ ದೇವರ ದಾಸಿಮಯ್ಯನವರು ಎಂದು ತಹಸೀಲ್ದಾರ್ ಮಮತಾ ಅಭಿಪ್ರಾಯಪಟ್ಟರು. ತಾಲೂಕು ಕಚೇರಿಯಲ್ಲಿ (Chikkanayakanahalli News) ಸೋಮವಾರ ಆಯೋಜಿಸಲಾಗಿದ್ದ 'ದೇವರ ದಾಸಿಮಯ್ಯ ಜಯಂತಿ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಾಸಿಮಯ್ಯನವರ ಕೊಡುಗೆಗಳನ್ನು ಸ್ಮರಿಸಿದ ಅವರು, "ಭಾರತೀಯ ಜೀವನ ಪದ್ಧತಿಗೆ ದಾಸಿಮಯ್ಯನವರು ಭದ್ರವಾದ ತಳಹದಿ ಹಾಕಿಕೊಟ್ಟರು. ಅವರ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಕೇವಲ ನಾಲ್ಕು ಸಾಲುಗಳ ವಚನಗಳಲ್ಲಿ ಗಂಡ-ಹೆಂಡತಿಯರ ಆದರ್ಶ ಜೀವನ ಹಾಗೂ ಸುಂದರ ಸಂಸಾರ ನಡೆಸುವ ಸೂತ್ರಗಳನ್ನು ಅವರು ಮನೋಜ್ಞವಾಗಿ ತಿಳಿಸಿದ್ದಾರೆ" ಎಂದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ʼ11ನೇ ಶತಮಾನದಲ್ಲಿಯೇ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ತಂದವರು ದಾಸಿಮಯ್ಯನವರು. ವರ್ಗ ಸಂಘರ್ಷ, ಲಿಂಗ ತಾರತಮ್ಯ ಹಾಗೂ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದ ಅವರು, ಜ್ಞಾನ ದಾಸೋಹದ ಮೂಲಕ ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರುʼ ಎಂದು ಸ್ಮರಿಸಿದರು.

ಕೃಷಿ ಕ್ರಾಂತಿಯ ಹರಿಕಾರ

ವಿಶೇಷ ಉಪನ್ಯಾಸ ನೀಡಿದ ಶಿಕ್ಷಕ ಹರ್ಷ, ʼಕ್ರಿ.ಶ. 980 ರಿಂದ 1070ರ ಅವಧಿಯಲ್ಲಿ ಜೀವಿಸಿದ್ದ ದಾಸಿಮಯ್ಯನವರು ಏಳು ಬಾವಿಗಳನ್ನು ತೋಡಿ ಕೃಷಿ ಕ್ರಾಂತಿ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದವರು. ಪ್ರಸ್ತುತ ಕಾಲಘಟ್ಟದ ದಮನಕಾರಿ ನೀತಿಗಳಿಗೆ ಇವರ ವಚನಗಳು ದಾರಿದೀಪವಾಗಿವೆʼ ಎಂದು ವಿವರಿಸಿದರು.

ದೇವಾಂಗ ಸಂಘದ ನಿರ್ದೇಶಕ ಬನಶಂಕರಯ್ಯ ಮಾತನಾಡಿ, ʼದಾಸಿಮಯ್ಯನವರ 90 ವಚನಗಳು ಅಧಿಕೃತವಾಗಿ ಲಭ್ಯವಿದ್ದು, ಅವರು ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಿದ್ದರುʼ ಎಂದರು. ಶಿಕ್ಷಕ ಕುಮಾರಸ್ವಾಮಿ ಅವರು ದಾಸಿಮಯ್ಯನವರ ತತ್ವಗಳ ಕುರಿತು ಮಾತನಾಡಿದರು.

BESCOM: ಪೂರ್ವ ಮುಂಗಾರು ಮಳೆ ಅಬ್ಬರ; ವಿದ್ಯುತ್ ಸುರಕ್ಷತಾ ಕ್ರಮ ಅನುಸರಿಸಲು ಬೆಸ್ಕಾಂ ಮನವಿ

ಕಾರ್ಯಕ್ರಮದಲ್ಲಿ ದೇವಾಂಗ ಸಂಘದ ಅಧ್ಯಕ್ಷ ಪ್ರಕಾಶ್, ಕನ್ನಡ ಸಂಘದ ಕಾರ್ಯದರ್ಶಿ ಕೃಷ್ಣೇಗೌಡ, ಪುರಸಭಾ ಮುಖ್ಯಾಧಿಕಾರಿ ಮಂಜಮ್ಮ, ಸಿಡಿಪಿಓ ಹೊನ್ನಪ್ಪ, ಕೃಷಿ ಇಲಾಖೆಯ ಉಮೇಶ್, ಬಿಆರ್‌ಸಿ ಪ್ರಕಾಶ್, ಲೋಕೋಪಯೋಗಿ ಇಲಾಖೆಯ ಮಂಜುರಾಜ ಅರಸ್ ಉಪಸ್ಥಿತರಿದ್ದರು. ಮುಖಂಡರುಗಳಾದ ಪಾಂಡುರಂಗ, ರಂಗನಾಥ್, ಜಗದೀಶ್, ಕೋಡಿ ಲೋಕೇಶ್, ವಿಶೇಷಗಿರಿ, ರವಿಕುಮಾರ್, ನವೀನ್, ಗೋಪಾಲ್ ಹಾಗೂ ತಾಲ್ಲೂಕು ಕಚೇರಿಯ ಸಿಬ್ಬಂದಿ ಭಾಗವಹಿಸಿದ್ದರು. ಪತ್ರಕರ್ತ ಧನಂಜಯ್ ಕಾರ್ಯಕ್ರಮ ನಿರೂಪಿಸಿದರು.