ತಿಪಟೂರು, ಜು.25: ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ನಾವು ಕೂಡ ಕೈಜೋಡಿಸಲು ಸದಾ ಸಿದ್ದ ಎಂದು ಕಾಂಗ್ರೆಸ್ ಮುಖಂಡ ಹಾಗೂ ಜನಸ್ಪಂದನ ಟ್ರಸ್ಟ್‌ನ ಅಧ್ಯಕ್ಷ ಟುಡಾ ಶಶಿಧರ್ ತಿಳಿಸಿದರು. ನಗರದ (Tiptur News) ಸಿಂಗ್ರಿ ನಂಜಪ್ಪ ವೃತ್ತದ ಬಳಿ ನೂರಾರು ಬೆಂಬಲಿಗರೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರವು ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಧ್ವನಿಯೆತ್ತಿದವರ ಮೇಲೆ ಲಾಟಿ ಪ್ರಹಾರ ನಡೆಸುತ್ತಿದೆ, ಹತ್ತು ಹನ್ನೆರಡು ವರ್ಷಗಳಿಂದಲೂ ಪ್ರಶ್ನೆ ಪತ್ರಿಕೆ ಸೋರಿಕೆ ನಿರಂತರವಾಗಿ ನಡೆಯುತ್ತಲೇ ಇದೆ. ನೀಟ್ ಪ್ರಶ್ನೆ ಪತ್ರಿಕೆಯನ್ನು ಮಾರಿಕೊಂಡು ಹಣ ಮಾಡಲು ಹೊರಟಿದ್ದಾರೆ. ಐಎಎಸ್, ಐಪಿಎಸ್‌ನಂತಹ ಸಿವಿಲ್ ಸರ್ವಿಸ್‌ಗಳಲ್ಲೂ ಭ್ರಷ್ಟಾಚಾರದ ವಾಸನೆ ಬರುತ್ತಿದೆ ಎಂದು ಆರೋಪಿಸಿದ ಅವರು, ಕೇಂದ್ರ ಸರ್ಕಾರವು ದೆಹಲಿ ಪೊಲೀಸರನ್ನು ಮುಂದಿಟ್ಟು ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ಗೂಂಡಾಗಳನ್ನು ಬಿಟ್ಟು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಇದೀಗ ಹಿಂಸಾರೂಪಕ್ಕೆ ತಂದು ನಿಲ್ಲಿಸಿದೆ ಎಂದು ದೂರಿದರು.
ಕೂಡಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಬೇಕು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು, ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿರುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದರು.
Tiptur News: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ತಿಪಟೂರಿನಲ್ಲಿ ಎಬಿವಿಪಿ ಪ್ರತಿಭಟನೆ
ಅವಶ್ಯಕತೆ ಇದ್ದರೆ ನಾವು ಕೂಡ ಪ್ರತಿಭಟನಾ ನಿರತರಾಗಿರುವ ವಿದ್ಯಾರ್ಥಿಗಳ ಜತೆ ಕೈಜೋಡಿಸುವುದಾಗಿ ತಿಳಿಸಿದ ಕಾಂಗ್ರೆಸ್ ಮುಖಂಡ ಹಾಗೂ ಜನಸ್ಪಂದನ ಟ್ರಸ್ಟ್‌ನ ಅಧ್ಯಕ್ಷ ಟುಡಾ ಶಶಿಧರ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.