ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೈಫಲ್‌ ಶೂಟಿಂಗ್‌ನಲ್ಲಿ ತುಮಕೂರಿನ 16 ವರ್ಷದ ಮಹಾಲಕ್ಷ್ಮಿ ಸಾಧನೆ: ಭಾರತೀಯ ಸೇನೆ ತರಬೇತಿಗೆ ಆಯ್ಕೆ

Tumkur's Shooter Mahalakshmi: ಶೂಟಿಂಗ್‌ ಜತೆಯಲ್ಲೇ ತಮ್ಮ ಶಿಕ್ಷಣವನ್ನೂ ಮುಂದುವರಿಸಿರುವ ತುಮಕೂರಿನ ಮಾರುತಿ ನಗರದದ ವಿದ್ಯಾರ್ಥಿನಿ ಮಹಾಲಕ್ಷ್ಮಿ, ಭಾರತೀಯ ಸೇನೆ ನಡೆಸಿದ ಟ್ರಯಲ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಭಾರತೀಯ ಸೇನೆಯ ಶೂಟಿಂಗ್‌ ತರಬೇತಿಗೆ ಆಯ್ಕೆಯಾಗಿದ್ದಾರೆ.

ತುಮಕೂರು: ರೈಫಲ್‌ ಶೂಟಿಂಗ್‌ ವಿಭಾಗದಲ್ಲಿ 16 ವರ್ಷದ ಮಹಾಲಕ್ಷ್ಮಿ (Shooter Mahalakshmi) ಅವರು ಅದ್ಭುತ ಸಾಧನೆ ಮಾಡಿದ್ದು, ಭಾರತೀಯ ಸೇನೆಯ ಶೂಟಿಂಗ್‌ ತರಬೇತಿಗೆ ಆಯ್ಕೆಯಾಗುವ ಮೂಲಕ ಇಡೀ ನಾಡಿನ ಗಮನ ಸೆಳೆದಿದ್ದಾರೆ. ​ನಗರದ ಮಾರುತಿ ನಗರದವರಾದ ಮಹಾಲಕ್ಷ್ಮಿ ಅವರು ಕಳೆದ ಒಂದೂವರೆ ವರ್ಷದಿಂದ ಮಧ್ಯಪ್ರದೇಶದ ಭಾರತೀಯ ಸೇನೆಯ 'ಎಜಿ ಆರ್ಮಿ ಸ್ಪೋರ್ಟ್ಸ್‌ ಕಂಪನಿ'ಯಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಸೇನೆಯ ಜೂನಿಯರ್‌ ತಂಡಕ್ಕೆ ಸೇರಲು ಸಿದ್ಧತೆ ನಡೆಸಿರುವ ಅವರು, ಸೇನೆ ನಡೆಸಿದ ಟ್ರಯಲ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಈ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

​ಕ್ರೀಡಾ ಪಯಣ ಮತ್ತು ಸಾಧನೆಗಳು:

​ಮಹಾಲಕ್ಷ್ಮಿ ಅವರು 2024 ಮತ್ತು 2025ರಲ್ಲಿ ಸತತವಾಗಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ​ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ 2024 ಹಾಗೂ 2025ರ ರಾಜ್ಯ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

​2024ರ ಮಿನಿ ಒಲಿಂಪಿಕ್ಸ್‌ ಮತ್ತು 2025ರ ಕ್ರೀಡಾಕೂಟದಲ್ಲಿ ಕಂಚಿನ ಪದಕಗಳನ್ನು ಪಡೆದಿದ್ದಾರೆ. ಜತೆಗೆ ರಾಷ್ಟ್ರೀಯ ಶೂಟಿಂಗ್‌ ಚಾಂಪಿಯನ್‌ಶಿಪ್‌ ಸೇರಿದಂತೆ ಹಲವು ಪಂದ್ಯಾವಳಿಗಳಲ್ಲಿ ಮಿಂಚಿದ್ದಾರೆ.

​ಶಿಕ್ಷಣ ಹಾಗೂ ತರಬೇತಿ

ಶೂಟಿಂಗ್‌ ಜತೆಯಲ್ಲೇ ತಮ್ಮ ಶಿಕ್ಷಣವನ್ನೂ ಮುಂದುವರಿಸಿರುವ ಇವರು ಸದ್ಯ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಆರಂಭದಲ್ಲಿ ವಿವೇಕಾನಂದ ಸ್ಪೋರ್ಟ್ಸ್ ಆಯಂಡ್‌ ಕಲ್ಚರಲ್ ಅಸೋಸಿಯೇಷನ್‌ನಲ್ಲಿ ಶೂಟಿಂಗ್‌ ತರಬೇತಿ ಆರಂಭಿಸಿದ್ದರು.

​ಮೊದಲು ಮಹಾಲಕ್ಷ್ಮಿ ಅವರ ಅಣ್ಣ ತರಬೇತಿ ಪಡೆಯುತ್ತಿದ್ದರು. ಅವರ ಜತೆಯಲ್ಲಿ ಪ್ರತಿ ದಿನ ತರಬೇತಿಗೆ ಹೋಗುತ್ತಿದ್ದ ಮಹಾಲಕ್ಷ್ಮಿ ಅವರಿಗೆ ಶೂಟಿಂಗ್‌ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿತು. ಆರಂಭದಲ್ಲಿ ಪೋಷಕರು ವಿರೋಧ ವ್ಯಕ್ತಪಡಿಸಿದರೂ, ನಂತರ ಅವರ ಆಸಕ್ತಿಗೆ ಒಪ್ಪಿಗೆ ಸೂಚಿಸಿದರು. ದಿನ ಕಳೆದಂತೆ ಕ್ರೀಡೆಯಲ್ಲಿ ಮತ್ತಷ್ಟು ಪ್ರೌಢಿಮೆ ಮೆರೆದ ಇವರು, ವಿವಿಧ ಟೂರ್ನಿಗಳಲ್ಲಿ ಪದಕಗಳನ್ನು ಗೆದ್ದು ತಮ್ಮ ಮೇಲಿನ ಭರವಸೆಯನ್ನು ಉಳಿಸಿಕೊಂಡಿದ್ದಾರೆ.

​ಮಹಾಲಕ್ಷ್ಮಿ ಅವರ ಅಸಾಧಾರಣ ಸಾಧನೆಯನ್ನು ಗುರುತಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 'ಅಸಾಧಾರಣ ಪ್ರತಿಭೆ' ಪ್ರಶಸ್ತಿ ನೀಡಿ ಗೌರವಿಸಿದೆ.

​"ಪ್ರಾರಂಭದಲ್ಲಿ ರೈಫಲ್‌ ಖರೀದಿಸಲು ಹಣ ಇರಲಿಲ್ಲ. ಡಿಸಿಸಿ ಬ್ಯಾಂಕ್‌ ಒಳಗೊಂಡಂತೆ ಹಲವರು ನೆರವಿನ ಹಸ್ತ ಚಾಚಿದರು. ಮಗಳು ಈಗಲೂ ಸೇನೆಯಿಂದ ತರಬೇತಿ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ಸೇನೆಯನ್ನು ಪ್ರತಿನಿಧಿಸಲಿದ್ದಾಳೆ. ಮಹಾಲಕ್ಷ್ಮಿ ತನ್ನ ಸಾಧನೆಯ ಮುಖಾಂತರ ಎಲ್ಲರ ನಂಬಿಕೆ ಉಳಿಸಿಕೊಳ್ಳುತ್ತಾಳೆ ಎಂಬ ವಿಶ್ವಾಸವಿದೆ" ಎಂದು ಅವರ ತಂದೆ ರವಿಕುಮಾರ್‌ ಹೆಮ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ.