ತುಮಕೂರು, ಅ. 17: ಮೇಲ್ಮನವಿ ಪ್ರಕರಣದಲ್ಲಿ ಅರ್ಜಿದಾರರ ಪರ ಆದೇಶ ಮಾಡಲು 50,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ತುಮಕೂರು-1 ಉಪವಿಭಾಗ ಕಚೇರಿಯ ಇಬ್ಬರು ಸಿಬ್ಬಂದಿ ಲೋಕಾಯುಕ್ತರ ಬಲೆಗೆ (Lokayukta Raid) ಬಿದ್ದಿದ್ದಾರೆ. ತುಮಕೂರು ತಾಲೂಕು, ಕೊರಟಗೆರೆ ಹೋಬಳಿ, ಬ್ರಹ್ಮಸಂದ್ರ ಗ್ರಾಮದ ವೀರಣ್ಣ ಎಂಬುವವರ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಕಲ್ಸಟ್ ಗುಂಟೆ ಗ್ರಾಮದ ಸರ್ವೆ ನಂಬರ್: 14/3ರ 28 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಮೇಲ್ಮನವಿ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ಆದೇಶ ಹೊರಡಿಸಲು ಲಂಚದ ಬೇಡಿಕೆ ಇಡಲಾಗಿತ್ತು. ವಿಶೇಷ ಉಪವಿಭಾಗಾಧಿಕಾರಿಗಳ ನ್ಯಾಯಾಲಯ, ತುಮಕೂರು-1 ಉಪವಿಭಾಗ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ವೀಣಾ ಹಾಗೂ ಟ್ರೈಪಿಸ್ ಉಮೇಶ್ ಎಂಬವವರು 50,000 ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ತುಮಕೂರಿನ ಅಶೋಕನಗರ 2ನೇ ಕ್ರಾಸ್ನಲ್ಲಿರುವ ಶಿವು ಜೆರಾಕ್ಸ್ ಸೆಂಟರ್ ಬಳಿ ಆರೋಪಿ ಉಮೇಶ್ ಲಂಚದ ಹಣ ಪಡೆದರೆ, ಆರೋಪಿ ವೀಣಾ ಅವರನ್ನು ನಗರದ ಮಹಾನಗರ ಪಾಲಿಕೆಯ ಕಚೇರಿ ಬಳಿ ವಶಕ್ಕೆ ಪಡೆಯಲಾಗಿದೆ. ಈ ಕುರಿತು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.
ತುಮಕೂರು ಪಾಲಿಕೆಯ 9 ನಿವೇಶನಗಳ ಅಕ್ರಮ ಖಾತೆ ಪ್ರಕರಣ: ಲೋಕಾಯುಕ್ತ ದಾಳಿ
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ್ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಡಾ. ಸಂತೋಷ್ ಕೆ.ಎಂ., ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ, ನಿರ್ಮಲಾ ವಿ., ರಾಜು ಟಿ. ಮತ್ತು ಸುನಿಲ್ ಕುಮಾರ್ ಎಚ್.ಎಸ್. ಹಾಗೂ ಸಿಬ್ಬಂದಿ ಲಂಚ ಸ್ವೀಕರಿಸಿದ್ದ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ತನಿಖೆ ಮುಂದುವರಿದಿದೆ.