ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Tumkur News: ಕೌಟುಂಬಿಕ ಕಲಹ: ನಾಪತ್ತೆಯಾಗಿದ್ದ ತುಮಕೂರಿನ ಮಹಿಳಾ ಪಿಎಸ್ಐ ಪತ್ತೆ

ತಾಯಿ ಮನೆಗೆ ಬಾರದೆ ಮತ್ತು ಫೋನ್ ಸಂಪರ್ಕಕ್ಕೂ ಸಿಗದ ಕಾರಣ ಆತಂಕಗೊಂಡ ಮಂಗಳಮ್ಮ ಅವರ ಪುತ್ರಿ, ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತೀವ್ರ ಹುಡುಕಾಟದ ನಂತರ ಚಿಕ್ಕಮಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಮಹಿಳಾ ಪಿಎಸ್‌ಐ ಪತ್ತೆಯಾಗಿದ್ದಾರೆ.

ತುಮಕೂರಿನ ಪಿಎಸ್‌ಐ ಮಂಗಳಮ್ಮ.

ತುಮಕೂರು: ಕೌಟುಂಬಿಕ ಕಲಹದಿಂದ ಮನನೊಂದು ನಾಪತ್ತೆಯಾಗಿದ್ದ ಮಹಿಳಾ ಪಿಎಸ್ಐ ಪತ್ತೆಯಾಗಿದ್ದಾರೆ. ನಗರದ ಹೊಸ ಬಡಾವಣೆ ಪೊಲೀಸ್ ಠಾಣೆಯ ಪಿಎಸ್ಐ-2 ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳಮ್ಮ ಕರ್ತವ್ಯ ನಿರ್ವಹಿಸುವ ವೇಳೆ ಸಮವಸ್ತ್ರದಲ್ಲಿಯೇ ಕಾಣೆಯಾಗಿದ್ದರು. ಈ ಬಗ್ಗೆ ಅವರ ಮಗಳು ದೂರು ನೀಡಿದ್ದರು. ಸದ್ಯ ಅವರು ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದು, ಈ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

ಶುಕ್ರವಾರ ಬೆಳಗ್ಗೆ ಡಿವೈಎಸ್‌ಪಿ ಕಚೇರಿಯಲ್ಲಿ ನಡೆದ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದ ಮಂಗಳಮ್ಮ, ಸಭೆಯ ಮಧ್ಯೆಯೇ ಇಂಪಾರ್ಟೆಂಟ್ ಫೋನ್‌ ಬಂದಿದೆ ಎಂದು ಹೊರಬಂದಿದ್ದರು. ಸಮವಸ್ತ್ರದಲ್ಲೇ ಹೊರಬಂದಿದ್ದ ಮಂಗಳಮ್ಮ ಬಳಿಕ ಎಲ್ಲಿ ಹೋದರೆಂಬ ಸುಳಿವು ಸಿಕ್ಕಿರಲಿಲ್ಲ. ನೆನ್ನೆ ಇಡೀ ದಿನ ಹುಡುಕಿದರೂ ಯಾರ ಸಂಪರ್ಕಕ್ಕೂ ಸಿಗದ ಹಿನ್ನೆಲೆ ಆತಂಕಗೊಂಡು ಪುತ್ರಿ ದೂರು ನೀಡಿದ್ದರು.

ತಾಯಿ ಮನೆಗೆ ಬಾರದೆ ಮತ್ತು ಫೋನ್ ಸಂಪರ್ಕಕ್ಕೂ ಸಿಗದ ಕಾರಣ ಆತಂಕಗೊಂಡ ಮಂಗಳಮ್ಮ ಅವರ ಪುತ್ರಿ, ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇತ್ತೀಚೆಗಷ್ಟೇ ಪುತ್ರಿಗೆ ವಿಚ್ಛೇದನವಾಗಿದ್ದ ಕಾರಣ, ತಾಯಿ ಮತ್ತು ಮಗಳು ಒಟ್ಟಿಗೆ ವಾಸವಿದ್ದರು ಎನ್ನಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಮನೆಯಲ್ಲಿ ನಡೆದಿದ್ದ ಕೌಟುಂಬಿಕ ಕಲಹದಿಂದ ಮಂಗಳಮ್ಮ ತೀವ್ರ ಮನನೊಂದಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಹುಡುಕಾಟ ಆರಂಭಿಸಿದ್ದರು.

ತೀವ್ರ ಹುಡುಕಾಟದ ನಂತರ ಪಿಎಸ್ಐ ಮಂಗಳಮ್ಮ ಚಿಕ್ಕಮಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತು ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದ್ದು, ಇದರಿಂದ ಪೊಲೀಸರು ಮತ್ತು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.