ತುಮಕೂರು, ಮಾ.27: ರಂಗಭೂಮಿ ಎಂಬುದು ಗಂಧರ್ವ ಕಲೆಯಾಗಿದೆ ಎಂದು ಸಮಾಜ ಸೇವಕ ಎಸ್.ಟಿ. ಶ್ರೀನಿವಾಸ್ ಅಭಿಪ್ರಾಯಪಟ್ಟರು. ಕರ್ನಾಟಕ ನಾಟಕ ಅಕಾಡೆಮಿ, ಝೆನ್ ಟೀಮ್ ಹಾಗೂ ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಸಂಶೋಧನಾ ಸಂಸ್ಥೆ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ (Tumkur News) ತುಮಕೂರು ವಿವಿ ಮುಂಭಾಗ ಆಯೋಜಿಸಿದ್ದ ಬೀದಿ ನಾಟಕಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ಪ್ರೇಕ್ಷಕರು ಇರುವ ಕಡೆ ನಾಟಕವನ್ನು ಒಯ್ದು ಆಡಿಸುವುದೇ ಬೀದಿ ನಾಟಕ ಎಂದ ಅವರು, ರಂಗಮಂದಿರವನ್ನಾಗಲಿ, ಬೆಳಕಿನ ವಿನ್ಯಾಸದ ಚಾತುರ್ಯ, ವೇಷಭೂಷಣ ಯಾವುದೇ ರಂಗಭೂಮಿಯ ನೆರವು ಇಲ್ಲದೆ ಆಯೋಜನೆಯಾಗುವ ಪ್ರಕಾರ ಬೀದಿ ನಾಟಕ ಎಂದರು. ಸಮಾಜದಲ್ಲಿನ ಜನ ಜೀವನಕ್ಕೆ ಜೀವಂತವಾಗಿ ಪ್ರತಿಸ್ಪಂದಿಸುವುದೇ ಬೀದಿ ನಾಟಕದ ಮುಖ್ಯ ಗುರಿ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಿಕ್ಕಪ್ಪಯ್ಯ ಮಾತನಾಡಿ, ಬೀದಿ ನಾಟಕವೆಂಬುದು ಸತ್ವಯುತ ಅಸ್ತ್ರವಿದ್ದಂತೆ. ಸಮಾಜವನ್ನು ತಿದ್ದುವ, ಪ್ರಭುತ್ವವನ್ನು ಪ್ರಶ್ನಿಸುವ ಮೂಲಕ ಬೀದಿ ನಾಟಕಗಳು ಚಾಟಿ ಬೀಸುವ ಕೆಲಸ ಮಾಡುತ್ತಾ ಬಂದಿದೆ ಎಂದರು. ಮತ್ತೊಬ್ಬ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಿಕ್ಕ ಹನುಮಂತಯ್ಯ ಮಾತನಾಡಿ, ಅನ್ಯಾಯ, ಶೋಷಣೆ, ಸಮಾಜದ ಅನಿಷ್ಟ ಪದ್ಧತಿ, ಪರಂಪರೆಗಳನ್ನು ವಿಮರ್ಶೆ, ವಿಶ್ಲೇಷಣೆಗೆ ಒಳಪಡಿಸುವ, ಜನರನ್ನು ಆ ವಿಷಯಗಳ ಬಗ್ಗೆ ಚಿಂತಿಸುವಂತೆ ಬೀದಿ ನಾಟಕ ಮಾಡುತ್ತದೆ ಎಂದರು.
ಶಾರದಾಂಬ ಟ್ರಸ್ಟ್‌ನ ಅಧ್ಯಕ್ಷೆ ಯಶೋದಾ ದೇವಸ್ಮಿತ ಮಾತನಾಡಿ ರಂಗಭೂಮಿ ಮೂಲಕ ಮನುಷ್ಯ ಸಂಬಂಧಗಳನ್ನು ಕಾಣಬಹುದಾಗಿದೆ ಎಂದ ಅವರು ನಾಟಕಕ್ಕೆ ಶುಭ ಕೋರಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ ನಾಟಕ ಅಕಾಡೆಮಿ ವತಿಯಿಂದ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಹಾಸ್ಯ ಬ್ರಹ್ಮ ನರಸಿಂಹರಾಜು ನಾಟಕ, ಸಿದ್ಧಗಂಗಾ ಮಠದಲ್ಲಿ ಶರಣರ ನಾಟಕ, ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ನಾಟಕೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
BESCOM: ಪೂರ್ವ ಮುಂಗಾರು ಮಳೆ ಅಬ್ಬರ; ವಿದ್ಯುತ್ ಸುರಕ್ಷತಾ ಕ್ರಮ ಅನುಸರಿಸಲು ಬೆಸ್ಕಾಂ ಮನವಿ
ರಂಗಕರ್ಮಿ ಎಸ್.ಎ. ಖಾನ್ ರಂಗಸಂದೇಶ ವಾಚಿಸಿದರು. ಬಳಿಕ ತುಮಕೂರು ವಿವಿ ಡಿವಿಜಿ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಡಾ. ಅಣ್ಣಮ್ಮ, ನಾಗಭೂಷಣ ಬಗ್ಗನಡು ಪಾಲ್ಗೊಂಡಿದ್ದರು. ಸಾಲು ಮರದ ತಿಮ್ಮಕ್ಕ ಸಾಂಸ್ಕೃತಿಕ ಬಳಗದಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು.